ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನಲ್ಲಿ ಮುಖ್ಯಮಂತ್ರಿ ಆಗಿದ್ದ ಅವಧಿಯಿಂದಲೂ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಸಕ್ರಿಯರಾಗಿರುತ್ತಿದ್ದರು. ಅವರು 2014ರಲ್ಲಿ ಪ್ರಧಾನಿಯಾದ ನಂತರ ಮತ್ತಷ್ಟು ಸಕ್ರಿಯರಾದರು. ಬಿಜೆಪಿ ದೇಶದಲ್ಲಿ ಅತಿ ಹೆಚ್ಚು ಸ್ಥಾನ ಗಳಿಸುವಂತಾಗಲು ಆ ಪಕ್ಷ ಬಳಸಿದ ಅತ್ಯಾಧುನಿಕ ತಂತ್ರವು ಇದಾಗಿತ್ತು ಎನ್ನುವುದರಲ್ಲಿ ಯಾವ ಸಂದೇಹವು ಇಲ್ಲ. ಇದೀಗ ಪ್ರಧಾನಿ ನರೇಂದ್ರ ಮೋದಿ ಸ್ವತಃ ದಿಗ್ಗಜನಿಂದಲೇ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮೋದಿ ‘ಎಕ್ಸ್’ನಲ್ಲಿ (ಟ್ವಿಟರ್) ಈಗ 10 ಕೋಟಿಗೂ ಹೆಚ್ಚು ಫಾಲೋವರ್ಗಳನ್ನು ಹೊಂದಿದ್ದಾರೆ.
ಆ ಮೂಲಕ ಪ್ರಧಾನಿ ಮೋದಿ ಅವರು ಮೈಕ್ರೋಬ್ಲಾಗಿಂಗ್ ಜಾಲತಾಣ ಎಕ್ಸ್ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದ ವಿಶ್ವ ನಾಯಕ ಎನಿಸಿಕೊಂಡಿದ್ದಾರೆ. ಇದನ್ನೇ ಉಲ್ಲೇಖ ಮಾಡಿರುವ ಎಕ್ಸ್ ಮಾಲೀಕ ಇಲಾನ್ ಮಸ್ಕ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ. ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು ಎಂದು ಮಸ್ಕ್ ಬರೆದುಕೊಂಡಿದ್ದಾರೆ.
ಈ ಮೊದಲು ಎಕ್ಸ್ನಲ್ಲಿ 100 ಕೋಟಿ ಫಾಲೋವರ್ಗಳ ಮೈಲಿಗಲ್ಲು ಕುರಿತು ಪ್ರಧಾನಿ ಮೋದಿ, ಸಂತೋಷವನ್ನು ಹಂಚಿಕೊಂಡಿದ್ದರು. ಈ ವೇದಿಕೆಯಲ್ಲಿ ಚರ್ಚೆ, ಮಾಹಿತಿ, ಟೀಕೆ, ವಿಮರ್ಶೆ, ಜನರ ಆಶೀರ್ವಾದ ಪಡೆಯಲು ಸಂತೋಷವಾಗುತ್ತಿದೆ. ಭವಿಷ್ಯದಲ್ಲೂ ಸಕ್ರಿಯವಾಗಿ ಮುಂದುವರಿಯುವುದನ್ನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದರು.
2009ರಲ್ಲಿ ಗುಜರಾತ್ನ ಮುಖ್ಯಮಂತ್ರಿ ಹುದ್ದೆ ವಹಿಸಿದ್ದಾಗ ಮೋದಿ ಅವರು ಟ್ವಿಟರ್ ಖಾತೆ ತೆರೆದಿದ್ದರು.
ಮೋದಿ ಯೂಟ್ಯೂಬ್ನಲ್ಲಿ ಸುಮಾರು 2.5 ಕೋಟಿ ಹಾಗೂ ಇನ್ಸ್ಟಾಗ್ರಾಮ್ನಲ್ಲಿ 9.1 ಕೋಟಿಗೂ ಹೆಚ್ಚು ಫಾಲೋವರ್ಗಳನ್ನು ಹೊಂದಿದ್ದಾರೆ.
ಎಕ್ಸ್ ನಲ್ಲಿ ಜುಲೈ 14ರಂದು ಮೋದಿ ಅವರ ಫಾಲೋವರ್ಗಳ ಸಂಖ್ಯೆ 10 ಕೋಟಿ ದಾಟಿತ್ತು. ಈ ಪೈಕಿ ಕಳೆದ ಮೂರು ವರ್ಷಗಳಲ್ಲೇ ಸುಮಾರು 3 ಕೋಟಿಗೂ ಹೆಚ್ಚು ಫಾಲೋವರ್ಗಳನ್ನು ಗಿಟ್ಟಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದ ವಿಶ್ವದ ಸಕ್ರಿಯ ರಾಜಕಾರಣಿ ಎನಿಸಿದ್ದಾರೆ. ಹುದ್ದೆಯಲ್ಲಿರುವ ವಿಶ್ವ ನಾಯಕರ ಪೈಕಿ ಅಮೆರಿಕದ ಜೋ ಬೈಡನ್ 3.1 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ.
ಮಾಜಿ ವಿಶ್ವ ನಾಯಕರ ಪೈಕಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ 13.7 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ.