ಬೆಳಗಾವಿ: ರೈತರ ಕಬ್ಬಿನ ಬಾಕಿ ಬಿಲ್ಲುಗಳನ್ನು ಜೂ.೨೫ರೊಳಗಾಗಿ ಪಾವತಿಸುವಂತೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಕಬ್ಬು ಬೆಳೆಗಾರರ ಹಾಗೂ ಸಕ್ಕರೆ ಕಾರ್ಖಾನೆಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು ೨೮ ಸಕ್ಕರೆ ಕಾರ್ಖಾನೆಗಳಿದ್ದು, ಈ ಪೈಕಿ ೩ ಸಕ್ಕರೆ ಕಾರ್ಖಾನೆಗಳು ರೈತರ ಬಿಲ್ ಬಾಕಿ ಉಳಿಸಿಕೊಂಡಿರುತ್ತವೆ. ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳು ಜೂ.೨೫ ರೊಳಗಾಗಿ ಕಾನೂನು ಪ್ರಕಾರ ಶೇ.೧೫ ರಷ್ಟು ಬಡ್ಡಿ ಸಮೇತ ಬಾಕಿ ಮೊತ್ತವನ್ನು ಪಾವತಿಸಬೇಕು.
ಒಂದು ವೇಳೆ ನಿಗದಿತ ಗಡುವಿನೊಳಗಾಗಿ ಬಾಕಿ ಪಾವತಿಸದೇ ಇರುವಂತಹ ಸಕ್ಕರೆ ಕಾರ್ಖಾನೆಗಳನ್ನು ಮುಟ್ಟುಗೊಳು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿಗಳು, ಜೂ.೨೫ ರೊಳಗಾಗಿ ಬಾಕಿ ಮೊತ್ತವನ್ನು ಬಡ್ಡಿ ಸಮೇತ ಪಾವತಿಸಲಾಗುವುದು ಎಂದು ಸಕ್ಕರೆ ಕಾರ್ಖಾನೆಗಳು ಮುಚ್ಚಳಿಕೆ ಪತ್ರ ನೀಡುವಂತೆ ತಿಳಿಸಿದರು.
ಜೂ.೨೫ ರೊಳಗಾಗಿ ರೈತರ ಬಾಕಿ ಮೊತ್ತ ಪಾವತಿಸದಿದ್ದಲ್ಲಿ ಅದರ ಮುಂದಿನ ಒಂದು ವಾರದಲ್ಲಿ ಮುಟ್ಟುಗೊಲು ಹಾಕಿಕೊಳ್ಳಲಾದ ಸಕ್ಕರೆ ಕಾರ್ಖಾನೆಗಳಲ್ಲಿನ ಸಕ್ಕರೆ ದಾಸ್ತಾನು ಹಾಗೂ ಸಾಮಗ್ರಿಗಳನ್ನು ಹರಾಜು ಹಾಕಿ ರೈತರ ಬಾಕಿ ಮೊತ್ತ ಪಾವತಿಗೆ ಕ್ರಮ ಕೈಗೊಳ್ಳಲಾಗುವದು ಎಂದು ಸಕ್ಕರೆ ಕಾರ್ಖಾನೆಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳಿಂದ ಬರಬೇಕಾದ ಮೊತ್ತದ ಜೊತೆಗೆ ಶೇ.೧೫ ರಷ್ಟು ಬಡ್ಡಿ ಸಮೇತ ಲೆಕ್ಕ ಹಾಕಿ ವರದಿ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಸೂಚನೆ ನೀಡಿದರು.
ಮಾಜಿ ಸಚಿವ ಶಶಿಕಾಂತ ನಾಯಿಕ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ್ ಕಂಕಣವಾಡಿ ಸೇರಿದಂತೆ ರೈತ ಮುಖಂಡರು ಹಾಗೂ ಕಾರ್ಖಾನೆಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.