ಬೆಳಗಾವಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೇ ಮುಂದಿನ ಸಿಎಂ ಯಾರು ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಗರಿಗೆದರಿವೆ. ಈ ನಡುವೆ ಲಕ್ಷ್ಮೀ ಹೆಬ್ಬಾಳ್ಕರ್ ಮುಂದಿನ ಮುಖ್ಯಮಂತ್ರಿ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಜ್ಯದ ಮುಂದಿನ ಸಿಎಂ ಆಗಬೇಕು. ಈ ಅರ್ಹತೆಯನ್ನು ಅವರು ಹೊಂದಿದ್ದಾರೆ.
ಈ ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿ ಆಗಲಿ ಎಂಬ ಪೋಸ್ಟರ್ ಗಳು ಫೇಸ್ ಬುಕ್ ಹಾಗೂ ವಾಟ್ಸಪ್ ಗಳಲ್ಲಿ ಲಕ್ಷ್ಮೀ ಬೆಂಬಲಿಗರು ಹರಿಯಬಿಡುತ್ತಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಮಾತನಾಡಿದ್ದ ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿಗಳು ಒಂದು ಭವಿಷ್ಯವನ್ನು ನುಡಿದಿದ್ದರು. ರಾಜ್ಯದಲ್ಲಿ ಮುಂದಿನ ಸಿಎಂ ಮಹಿಳೆ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಇದನ್ನು ಮುಂದಿಟ್ಟುಕೊಂಡು ಲಕ್ಷ್ಮೀ ಹೆಬ್ಬಾಳ್ಕರ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮುಂದಿನ ಸಿಎಂ ಲಕ್ಷ್ಮೀ ಹೆಬ್ಬಾಳ್ಕರ್ ಎಂದು ಪೋಸ್ಟರ್ ನ್ನು ಹರಿಯಬಿಟ್ಟಿದ್ದಾರೆ.ಒಂದು ವೇಳೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗಿಳಿದರೆ ಲಕ್ಷ್ಮೀ ಹೆಬ್ಬಾಳ್ಕರ್ ಸಿಎಂ ಆಗಲಿ ಎಂದು ಬೆಂಬಲಿಗರು ಬೇಡಿಕೆ ಇಟ್ಟಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟರ್ ಗಳು ಹರಿದಾಡುತ್ತಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಚರ್ಚೆಯ ಬೆನ್ನಲ್ಲೇ ಹಲವು ಸಚಿವರು ನಾನೂ ಸಿಎಂ ಆಕಾಂಕ್ಷಿ ಎಂದು ಹೇಳಿಕೆ ಕೊಟ್ಟಿದ್ದಾರೆ. ಎಂಬಿ ಪಾಟೀಲ್, ಆರ್ ವಿ ದೇಶಪಾಂಡೆ, ಸತೀಶ್ ಜಾರಕಿಹೊಳಿ, ಡಿಕೆ ಶಿವಕುಮಾರ್, ಪರಮೇಶ್ವರ್, ಶಿವಾನಂದ ಪಾಟೀಲ್ ಸೇರಿದಂತೆ ಹಲವರು ಆಕಾಂಕ್ಷಿಗಳಾಗಿದ್ದಾರೆ. ಈ ನಡುವೆ ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಮತ್ತು ಮಂಜುನಾಥ್ ಭಂಡಾರಿ ಎಐಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ಸಿಎಂ ಸ್ಥಾನದ ಬಗ್ಗೆ ಬಹಿರಂಗ ಹೇಳಿಕೆ ಕೊಡದಂತೆ ಎಚ್ಚರಿಕೆ ನೀಡಬೇಕು ಎಂದು ಮನವಿ ಮಾಡಿದ್ದರು.
ಆಗಸ್ಟ್ 20 ರಂದು ಬೆಳಗಾವಿಯಲ್ಲಿ ಮಾತನಾಡಿದ್ದ ಕೋಡಿಮಠ ಡಾ.ಶಿವಾನಂದ ಸ್ವಾಮೀಜಿ ಒಮ್ಮೆ ಮಹಿಳೆಯರಿಗೆ ರಾಜ್ಯದ ಮುಖ್ಯಮಂತ್ರಿಯಾಗುವ ಯೋಗ ಬರಲಿದೆ ಎಂದು ಭವಿಷ್ಯ ನುಡಿದಿದ್ದರು. ಬೆಳಗಾವಿಯಲ್ಲಿ ಮಾತನಾಡಿದ್ದ ಅವರು, ಈ ರಾಜ್ಯಕ್ಕೆ ಮಹಿಳಾ ಮುಖ್ಯಮಂತ್ರಿ ಆಗುವ ಯೋಗ ಇದೆಯೇ?’ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮಹಿಳೆಯರಿಗೂ ಅವಕಾಶ ಸಿಗಲಿ ಎಂದು ಹೇಳಿದ್ದರು. ಮುಂದೆ ಮಹಿಳೆಯರಿಗೆ ಸಿಎಂ ಆಗುವ ಯೋಗ ಬರಲಿದೆ, ಅವರಿಗೂ ಅವಕಾಶ ಸಿಗಲಿದೆ, ಹಣದ ಹಿಂದೆ ಮನುಷ್ಯ ಹೋಗದೇ ದೈವದ ಹಿಂದೆ ಹೋಗಬೇಕು ಎಂದಿದ್ದರು.