Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ರೇಷ್ಮೆಬಟ್ಟೆ: ಬೆಳಗಾವಿಗೆ ಬಂದ ವಸುಧೇಂದ್ರ..!

ಬೆಳಗಾವಿ : ತಮ್ಮ ಅಧ್ಯಯನ ಮತ್ತು ಆಕರ್ಷಕ ಶೈಲಿಯಿಂದ ತಮ್ಮದೇ ಆದ ಓದುಗ ಬಳಗವನ್ನು ಸೃಷ್ಟಿಸಿಕೊಂಡಿರುವ ಕನ್ನಡದ ಖ್ಯಾತನಾಮ ಕಾದಂಬರಿಕಾರ ವಸುಧೇಂದ್ರ ಅವರ ಹೊಸ ಕಾದಂಬರಿ ರೇಷ್ಮೆ ಬಟ್ಟೆ ಕುರಿತ ಸಂವಾದ ಬೆಳಗಾವಿಯ ಸಾಹಿತ್ಯಾಸಕ್ತರಿಗೆ ರವಿವಾರ ಸಂಜೆ ರಸದೌತಣ ನೀಡಿತು. ನಗರದ ಸಪ್ನ ಬುಕ್ ಹೌಸ್ ನಲ್ಲಿ ರವಿವಾರ ಸಂಜೆ ನಡೆದ ಸಂವಾದದಲ್ಲಿ ಕಾದಂಬರಿಕಾರ ವಸುಧೇಂದ್ರ ಅವರು ಸುಮಾರು 2 ಗಂಟೆಗಳ ಕಾಲ ತಮ್ಮ ಹೊಸ ಕಾದಂಬರಿ ರೇಷ್ಮೆ ಬಟ್ಟೆ ಕುರಿತು ಸುದೀರ್ಘ ಅನುಭವವನ್ನು ಓದುಗರ ಮುಂದೆ ತೆರೆದಿಟ್ಟರು.

ಇತಿಹಾಸದ ಘಟನೆಗಳನ್ನು ಅತ್ಯಂತ ನವಿರಾಗಿ ಚಿತ್ರಿಸಿದ ವಸುಧೇಂದ್ರ ಅವರು ಏಷ್ಯಾದಿಂದ ಯುರೋಪಿಗೆ ಇದ್ದ ಸಿಲ್ಕ್ ರೂಟ್ ನಿಂದ 16ನೇ ಶತಮಾನದವರೆಗೆ ಜಗತ್ತಿನಲ್ಲಿ ಆದ ಘಟನೆಗಳನ್ನು ಅತ್ಯಂತ ಸುಂದರವಾಗಿ ಕಣ್ಣ ಮುಂದೆ ತೆರೆದಿಟ್ಟರು. ಜಗತ್ತಿನಲ್ಲಿ ಯಾವಾಗ ಹಡಗಿನ ಆವಿಷ್ಕಾರ ಆಯಿತು ಅಂದಿನಿಂದ ಸಿಲ್ಕ್ ರೂಟ್ ಎನ್ನುವುದು ಸಂಪೂರ್ಣವಾಗಿ ಮರೆಯಾಗಿ ಹೋಯಿತು. ಅದು ಎಷ್ಟರ ಮಟ್ಟಿಗೆ ಎಂದರೆ ಜಗತ್ತಿನಲ್ಲಿ ಈ ಹಿಂದೆ ಸಿಲ್ಕ್ ರೂಟ್ ಇತ್ತು ಎನ್ನುವುದು ಗೊತ್ತಿಲ್ಲದಷ್ಟು ಪ್ರಮಾಣದಲ್ಲಿ ಸಿಲ್ಕ್ ರೂಟ್ ಶಾಶ್ವತವಾಗಿ ಮುಚ್ಚಲ್ಪಟ್ಟಿತು ಎಂದು ಹೇಳಿದರು.

ಬೆಳಗಾವಿಯಲ್ಲಿ
ವಸುಧೇಂದ್ರ ಮಾತುಕತೆ :
'ರೇಷ್ಮೆ ಬಟ್ಟೆ' ಕಾದಂಬರಿ ಬರೆಯಬೇಕಾದರೆ ನಾಲ್ಕು ವರ್ಷ ತೆಗೆದುಕೊಂಡಿದ್ದೇನೆ. ಇಂಜಿನಿಯರಿಂಗ್ ನಾಲ್ಕು ವರ್ಷ ಓದಿರುವ ನನಗೆ ಅಲ್ಲಿ ಪಠ್ಯಕ್ರಮ ಇರುತ್ತಿತ್ತು. ಆದರೆ, ಇಲ್ಲಿ ಅದು ಇರುವುದಿಲ್ಲ. ಎಂಜಿನಿಯರ್ ನಲ್ಲಿ ನಾನು ಟಾಪರ್ ಆದರೂ ಆಗ ಅಷ್ಟು ಓದಿರಲಿಲ್ಲ. ಆದರೆ ರೇಷ್ಮೆ ಬಟ್ಟೆ ಕಾದಂಬರಿ ಬರೆಯಲು ಸಾಕಷ್ಟು ಶ್ರಮ ಹಾಕಿ ಓದಬೇಕಾಯಿತು. ಸಾಹಿತ್ಯದ ವಿಸ್ತಾರ ದೊಡ್ಡದು. ಕಥೆಯ ಮೂಲಕ ಇತಿಹಾಸ ಹೇಳಿದರೆ ರುಚಿಸುತ್ತದೆ ಎಂಬ ಕಾರಣಕ್ಕೆ ನಾಲ್ಕು ವರ್ಷ ಎಲ್ಲವನ್ನೂ ನಾನು ಓದುತ್ತ ಹೋದೆ. ಬಹಳಷ್ಟು ಅಧ್ಯಯನ ಮಾಡಿದ ನಂತರ ಕೃತಿ ರಚಿಸಿದ್ದರಿಂದ ಓದುಗರಿಗೆ ಹಿಡಿಸಬಹುದು ಎಂದರು.

ಕಾಲ್ಪನಿಕ ಕಥೆ ಬರೆಯಲು ಮುಖ್ಯವಾಗಿ ಧೈರ್ಯ ಬೇಕು. ನನ್ನದಲ್ಲದ ಜಗತ್ತನ್ನು ಸೃಷ್ಟಿಸುವುದು ಅಥವಾ ಚಿತ್ರಿಸುವುದು ಸವಾಲಿನ ಕೆಲಸ. ಅದನ್ನು ನಾನು ಈ ಕೃತಿಯಲ್ಲಿ ಮಾಡಿದ್ದೇನೆ. ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ಇಂತಹ ಪುಸ್ತಕಗಳ ಮೂಲಕ ಇತಿಹಾಸದ ಬಗ್ಗೆ ಪ್ರೀತಿ ಹುಟ್ಟಿಸಬಹುದು ಎಂದರು.

ಓದುಗರು ಕೇಳಿದ ಹಲವು ಪ್ರಶ್ನೆಗಳಿಗೆ ವಸುಧೇಂದ್ರ ಅವರು ಉತ್ತರಿಸುತ್ತ, ತಾವು ನಾಲ್ಕು ವರ್ಷಗಳ ಕಾಲ ಓದಿದ ಹಲವು ಸಂಗತಿಗಳನ್ನು, ಇತಿಹಾಸ ಪುಟಗಳಿಂದ ತಾವು ಕಂಡುಕೊಂಡ ಸಂಗತಿಗಳನ್ನು ಹಂಚಿಕೊಂಡರು. ಮನೋರಂಜನೆ ಜತೆಗೆ ಇತಿಹಾಸ ತಿಳಿಯುವ ಅವಕಾಶ ಇಲ್ಲಿದೆ. ಇದು ನನ್ನ ಆಶಯ ಕೂಡ ಆಗಿತ್ತು ಎಂದರು.

ಭಾರತೀಯರು ಇಡೀ ಜಗತ್ತಿಗೆ ಸೊನ್ನೆಯನ್ನು ಹೇಗೆ ಪರಿಚಯಿಸಿದ್ದರೋ ಅದೇ ರೀತಿ
ಚೀನಿಯರು ಹೆಚ್ಚು ಸಂಶೋಧನಾ ಪ್ರವೃತ್ತಿ ಉಳ್ಳವರು. ಸಕ್ಕರೆ, ಕಾಗದ, ರೇಷ್ಮೆ ಹೀಗೆ ಹಲವು ಸಂಗತಿಗಳನ್ನು ಮೊದಲು ಕಂಡುಕೊಂಡವರು ಅವರು. ಬೌದ್ಧ, ಜೈನ್ ಧರ್ಮಗಳು ಸೇರಿ ಹಲವು ಸಂಗತಿಗಳು ರಸ್ತೆಗಳ ಅವಿಷ್ಕಾರದಿಂದ ಜಗತ್ತಿಗೆ ಹೇಗೆ ಪಸರಿಸಿದವು, ಅಮೆರಿಕಕ್ಕಿಂತ ಹೆಚ್ಚಿನ ಆವಿಷ್ಕಾರಗಳು ಚೀನಾದಲ್ಲೇ ನಡೆದಿದ್ದವು ಎಂಬುದನ್ನು ಸವಿಸ್ತಾರವಾಗಿ ವಿವರಿಸಿದರು.

ರಾಜಕೀಯ ಕಾರಣಕ್ಕಾಗಿ ಕಳೆದ ನೂರು ವರ್ಷಗಳಿಂದ ಈಚೆಗೆ ಭಾರತ ಮತ್ತು ಚೀನಾ ನಡುವಿನ ಸಂಬಂಧ ಹದಗೆಟ್ಟಿರಬಹುದು. ಈಗ ನಾವು ಶತ್ರು ರಾಷ್ಟ್ರಗಳಾಗಿರಬಹುದು. ಆದರೆ, ಸಾವಿರಾರು ವರ್ಷಗಳಿಂದ ನಾವು ಪರಸ್ಪರ ಸಹೋದರ ಭಾವನೆಯಿಂದ ಬದುಕುತ್ತಿದ್ದೆವು. ಚೀನಿ ಭಾಷೆಯ ಗ್ರಂಥದಲ್ಲಿ 35 ಸಾವಿರಕ್ಕೂ ಅಧಿಕ ಸಂಸ್ಕೃತ ಶಬ್ದಗಳಿವೆ. ಸಂಸ್ಕೃತದ ಮೊದಲ ಗ್ರಂಥ ಚೀನಾದಲ್ಲಿ ದೊರಕಿತ್ತು. ಭಾರತ ಮತ್ತು ಚೀನಾ ನಡುವಿನ ಸಂಬಂಧ ಮೊದಲಿನಿಂದಲೂ ಅತ್ಯಂತ ಗಾಢವಾಗಿತ್ತು ಎಂದು ಅವರು ವಿಶ್ಲೇಷಿಸಿದರು.



ರೇಷ್ಮೆ ಬಟ್ಟೆಯಲ್ಲಿ ಏನಿದೆ ?
ಹೊಸ ಕಾದಂಬರಿ ಇದೀಗ ಬಿಡುಗಡೆಯಾಗಿದೆ. ತಮ್ಮ ಅಧ್ಯಯನ ಹಾಗೂ ಆಕರ್ಷಕ ಶೈಲಿಯಿಂದ ತಮ್ಮದೇ ಆದ ಓದುಗ ಬಳಗ ಸೃಷ್ಟಿಸಿಕೊಂಡಿರುವ ವಸುಧೇಂದ್ರ ಅವರ ಈ ಹೊಸ ಕಾದಂಬರಿಯ ಆಯ್ದ ಭಾಗವೊಂದು ಇಲ್ಲಿದೆ.

ಯವನರ ರಾಜ್ಯದಿಂದ ಸಾವಿರಾರು ಮೈಲಿಗಳ ಆಚೆ, ಹಲವು ಕಾಡುಗಳು ಹಲವು ನಾಡುಗಳು ಹಲವು ನದಿಗಳು ಹಲವು ಮರುಭೂಮಿಗಳನ್ನು ದಾಟಿದ ಮೇಲೆ ಚೀನೀಯರ ಸಾಮ್ರಾಜ್ಯವಿದೆ. ಚೀನೀಯರ ಸೀಮೆಯ ಉತ್ತರದ ಕಾಡಿನಲ್ಲಿ ಹೂಣರು ನೆಲೆಸಿದ್ದಾರೆ. ಚೀನೀಯರು ಮನೆ ಮತ್ತು ಅರಮನೆ ಕಟ್ಟಿಕೊಂಡು ಕಷ್ಟಪಟ್ಟು ಕೃಷಿ ಮಾಡಿಕೊಂಡು ರೇಷ್ಮೆ ಬೆಳೆದು ಬಣ್ಣದ ಬಟ್ಟೆಗಳನ್ನು ನೇಯುತ್ತಾ ಸ್ಥಾವರದ ಬದುಕನ್ನು ಬಾಳುತ್ತಿದ್ದರೆ, ಉತ್ತರದ ಹೂಣರದು ಕಾಡಿನಲ್ಲಿ ಸುತ್ತಾಡುವ ಬದುಕು. ಕುದುರೆ, ಹಸು, ಕುರಿಗಳನ್ನು ಸಾಕಿಕೊಂಡಿರುವ ಹೂಣರು, ಒಂದೊಂದು ಹುಲ್ಲುಗಾವಲಿನಲ್ಲಿ ಒಂದಿಷ್ಟು ಕಾಲ ನೆಲೆ ನಿಂತು ಅದು ಬೋಳಾಗುತ್ತಲೇ ಮತ್ತೊಂದು ಹುಲ್ಲುಗಾವಲನ್ನು ಹುಡುಕಿಕೊಂಡು ಹೋಗುತ್ತಾರೆ. ನಿತ್ಯ ಬೇಟೆಯಾಡಿ ಹೊಟ್ಟೆ ಹೊರೆದುಕೊಂಡು ನಾಳೆಯೆಂಬುದರ ಚಿಂತೆಯಿಲ್ಲದೆ ಬಾಳುತ್ತಾರೆ. ಕುರಿ ಮತ್ತು ಹಸುಗಳ ಹಾಲನ್ನು ನೀರಿಗಿಂತಲೂ ಹೆಚ್ಚು ಸೇವಿಸುತ್ತಾರೆ. ಕಾಡಿನ ತಿರುಗಾಟದ ಬದುಕಿಗೆ ಸಹಜವೆನ್ನುವಂತೆ ಅವರದು ದಷ್ಟಪುಷ್ಟ ಮೈಕಟ್ಟು.... ಹೀಗೆ ಹೊಸ ಹೊಸ ವಿಷಯಗಳನ್ನು ಕಟ್ಟಿಕೊಡುತ್ತಾ ಹೋಗುವ ಕಾದಂಬರಿ ಓದುಗರನ್ನು ಇನ್ನಿಲ್ಲದಂತೆ ವ್ಯಾಪಿಸುತ್ತಾ ಹೋಗುತ್ತದೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ