ಬೆಂಗಳೂರು: ವಿಧಾನಸಭೆಯ ಚುನಾಯಿತ ಪ್ರತಿನಿಧಿಗಳಿಂದ ಆಯ್ಕೆಯಾಗಬೇಕಿರುವ ರಾಜ್ಯಸಭೆಯ 4 ಸ್ಥಾನಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿದ್ದು ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ಅಭ್ಯರ್ಥಿ ಯಾರು ಎನ್ನುವ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಬಿಜೆಪಿ ಅಭ್ಯರ್ಥಿಯಾಗಿ ಪ್ರೊ. ಎಂ.ನಾಗರಾಜ್ ಅವರ ಹೆಸರನ್ನು ತಡರಾತ್ರಿ ಪ್ರಕಟಿಸಲಾಗಿದೆ. ಈ ಮೂಲಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮರು ಆಯ್ಕೆ ತಪ್ಪಿದೆ.
ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಜೂ.18 ರಂದು ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ಕೊನೆಯ ಕ್ಷಣದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ನಿರೀಕ್ಷೆಯಂತೆ ಹುಬ್ಬಳ್ಳಿಯ ಲಿಂಗರಾಜ ಪಾಟೀಲ್ ಮತ್ತು ಮೈಸೂರಿನ ರಘು ಕೌಟಿಲ್ಯ ಅವರನ್ನು ಕಣಕ್ಕಿಳಿಸಿದೆ. ನಾಮಪತ್ರ ಸಲ್ಲಿಕೆಗೆ ಸೋಮವಾರ ಕಡೇ ದಿನವಾದ ಕಾರಣ ಬಿಜೆಪಿ ಹೈಕಮಾಂಡ್ ಭಾನುವಾರ ತಡರಾತ್ರಿ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿ ಪ್ರಕಟಿಸಿದೆ.
ನಾಮಪತ್ರ ಸಲ್ಲಿಕೆ ಜೂ.1ರಿಂದಲೇ ಆರಂಭವಾಗಿದೆ. ಕಾಂಗ್ರೆಸ್‌ನಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕ ಕೆ.ರೆಹಮಾನ್ ಖಾನ್ ಪುತ್ರ ಮನ್ಸೂರ್ ಅಲಿ ಖಾನ್ ಹಾಗೂ ರಾಷ್ಟ್ರೀಯ ವಕ್ತಾರ ಪವನ್ ಖೇರಾ ಅವರನ್ನು ಕಣಕ್ಕಿಳಿಸಲಾಗಿದೆ. ಮೂವರೂ ಈಗಾಗಲೇ ನಾಮಪತ್ರವನ್ನೂ ಸಲ್ಲಿಸಿದ್ದಾರೆ.
ರಾಜ್ಯಸಭೆಯ ಪ್ರತಿ ಅಭ್ಯರ್ಥಿಯ ಗೆಲುವಿಗೆ 45 ಮತಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ 4ನೇ ಸ್ಥಾನವನ್ನು ಗೆಲ್ಲಲು ಬಿಜೆಪಿ ಬಳಿ ಮತಗಳಿವೆ. ರಾಜ್ಯ ಬಿಜೆಪಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಹಿರಿಯ ಮುಖಂಡ ನಿರ್ಮಲ್ ಕುಮಾರ್ ಸುರಾನಾ ಅವರ ಹೆಸರು ಶಿಫಾರಸು ಮಾಡಿತ್ತು. ಮಾಜಿ ಸಂಸದೆ ಸುಮಲತಾ ಸಹ ರಾಜ್ಯಸಭೆ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಅಚ್ಚರಿ ಎಂಬಂತೆ ರಾಜಕೀಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಹುಬ್ಬಳ್ಳಿ-ಧಾರವಾಡದವರಾದ ಪ್ರೊ. ಎಂ.ನಾಗರಾಜ್ ಅವರನ್ನು ಅಭ್ಯರ್ಥಿಯಾಗಿ ಬಿಜೆಪಿ ಆಯ್ಕೆ ಮಾಡಿದೆ.
ದೇವೇಗೌಡರನ್ನು ಮುಂದುವರಿಸಿದರೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೆ ಮೈತ್ರಿ ಬಲ ಬಂದಾಗುತ್ತದೆ ಎನ್ನುವ ಆಲೋಚನೆಯನ್ನು ವರಿಷ್ಠರು ಹೊಂದಿದ್ದರು. ಆದರೆ, ಈ ಸ್ಥಾನವನ್ನು ಬಿಜೆಪಿಗೆ ಪಡೆಯಬೇಕು ಎಂಬ ಒತ್ತಾಯವೂ ರಾಜ್ಯ ಬಿಜೆಪಿ ನಾಯಕರಿಂದ ಇತ್ತು. ಈ ನಡುವೆ ಬೆಂಗಳೂರಿನಲ್ಲಿ ಭಾನುವಾರ ಪ್ರತಿಕ್ರಿಯಿಸಿದ್ದ ದೇವೇಗೌಡರು, ‘ನಾನು ಈಗ ರಾಜ್ಯಸಭೆ ಸದಸ್ಯನಲ್ಲ, ನನ್ನ ಅವಧಿ ಮುಗಿದಿದೆ’ ಎಂದು ಹೇಳಿರುವುದು ಕುತೂಹಲ ಮೂಡಿಸಿತ್ತು. ಇದು ರಾಜಕೀಯ ನಿವೃತ್ತಿಯ ಮಾತೋ ಅಥವಾ ಮತ್ತೊಮ್ಮೆ ಸದಸ್ಯತ್ವ ಮುಂದುವರಿಸಲು ಹೇರುತ್ತಿರುವ ಒತ್ತಡವೋ ಎಂಬ ಗೊಂದಲ ಇತ್ತು. ಆದರೆ, ಬಿಜೆಪಿ ಪಟ್ಟಿ ಪ್ರಕಟವಾಗುವ ಮೂಲಕ ಇದು ಸ್ಪಷ್ಟವಾಗಿದೆ.
ಪುನರಾಯ್ಕೆಗೆ ಪ್ರಯತ್ನಿಸದ ಜೆಡಿಎಸ್:
ದೇವೇಗೌಡರನ್ನು ಸದನದಲ್ಲಿ ಮುಂದುವರಿಸಬೇಕು ಎಂದು ಸ್ವತಃ ದೇವೇಗೌಡರಾಗಲಿ, ಜೆಡಿಎಸ್ ಪಕ್ಷವಾಗಲಿ ತೀವ್ರ ಪ್ರಯತ್ನ ನಡೆಸದಿರುವುದು ಅಚ್ಚರಿ ಮೂಡಿಸಿದೆ. ದೇವೇಗೌಡರನ್ನೇ ಮುಂದುವರಿಸಲಾಗುತ್ತದೆ ಎಂದು ಬಿಜೆಪಿಯಲ್ಲಿ ಮಾತುಗಳಿತ್ತಾದರೂ ಜೆಡಿಎಸ್‌ನಿಂದ ಒತ್ತಡ ಬರಲಿಲ್ಲ. ಬಹುಶಃ ದೇವೇಗೌಡರೇ ಸದನ ಸಾಕೆಂದು ಸುಮ್ಮನಾಗಿದ್ದಾರೆ. ದೆಹಲಿಯಲ್ಲಿ ಈಗಾಗಲೇ ಸಚಿವರಾಗಿ ಎಚ್.ಡಿ. ಕುಮಾರಸ್ವಾಮಿ ಇರುವುದರಿಂದ ಅಲ್ಲಿ ಆಗಬೇಕಾದ ಕೆಲಸಗಳಿಗೂ ತೊಂದರೆ ಆಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಈಗ ದೇವೇಗೌಡರಿಗೆ ಅವಕಾಶ ಕೇಳಿಲ್ಲ ಎನ್ನುವುದನ್ನು ಮುಂದಿಟ್ಟುಕೊಂಡು ಮುಂಬರುವ ಜಿಬಿಎ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಹೆಚ್ಚಿನ ಚೌಕಾಸಿ ಮಾಡಬಹುದು ಎನ್ನುವುದು ಜೆಡಿಎಸ್ ಲೆಕ್ಕ ಎನ್ನಲಾಗಿದೆ. ಈ ಕುರಿತು ಸೋಮವಾರ ಎಚ್.ಡಿ. ಕುಮಾರಸ್ವಾಮಿ ಅವರು ನಡೆಸುವ ಸಭೆಯಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ.
ಬೀಳ್ಕೊಡುಗೆ ಇಲ್ಲವೇ?:
ದೇವೇಗೌಡರ ರಾಜ್ಯಸಭೆ ಅವಧಿ ಜೂ.25ಕ್ಕೆ ಕೊನೆಗೊಳ್ಳಲಿದೆ. ಆದರೆ, ಮುಂದಿನ ಸಂಸತ್ ಅಧಿವೇಶನ ಜುಲೈ ಮಧ್ಯದಿಂದ ಆರಂಭವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡರಿಗೆ ಸದನದಿಂದ ಬೀಳ್ಕೊಡುವುದಿಲ್ಲವೇ ಎಂಬ ಅನುಮಾನ ಉಂಟಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಯಾರಿದು ಪ್ರೊ. ನಾಗರಾಜ್?
ಪ್ರೊ. ಎಂ.ನಾಗರಾಜ್ ಅವರು ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿರುವ ಕರ್ನಾಟಕ ಬಿಜೆಪಿಯ ಹಿರಿಯ ಮುಖಂಡರು. ಮೂಲತಃ ಹುಬ್ಬಳ್ಳಿ-ಧಾರವಾಡದವರಾದ ನಾಗರಾಜ್, ಶೈಕ್ಷಣಿಕ ವಲಯದಿಂದ ಬಂದವರಾಗಿದ್ದು, ದೀರ್ಘಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಎಬಿವಿಪಿ ಮತ್ತು ಆರ್‌ಎಸ್‌ಎಸ್ ಸಂಘಟನೆಗಳ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಇವರು, ನಂತರ ಭಾರತೀಯ ಜನತಾ ಪಕ್ಷದ ಮೂಲಕ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು.
ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಇದರೊಂದಿಗೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಆಡಳಿತಾತ್ಮಕ ಅನುಭವ ಇವರಿಗಿದೆ. ಜನಸಂಘದ ಸ್ಥಾಪಕ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮಶತಮನೋತ್ಸವ ವರ್ಷದ ನಿಮಿತ್ತ ಪ್ರತಿ ಜಿಲ್ಲೆಯಲ್ಲೂ ಬಿಜೆಪಿಯ ಸ್ವಂತ ಕಾರ್ಯಾಲಯ ನಿರ್ಮಿಸುವ ಅಮಿತ್ ಶಾ ಅವರ ಕನಸಿನ ಯೋಜನೆಯಲ್ಲಿ ಭವನ ನಿರ್ಮಾಣ ಸಮಿತಿಗೆ ಕರ್ನಾಟಕದ ಸಂಚಾಲಕರಾಗಿಯೂ ಕೆಲಸ ಮಾಡಿದ್ದಾರೆ.
ಶಿಸ್ತು ಸಮಿತಿಗೆ ರಾಜೀನಾಮೆ ಕೊಟ್ಟಿದ್ದ ಲಿಂಗರಾಜ ಪಾಟೀಲ್
ಲಿಂಗರಾಜ ಪಾಟೀಲ್ ಅವರು ಹುಬ್ಬಳ್ಳಿ ಮೂಲದ ಕರ್ನಾಟಕದವರು. ಭಾರತೀಯ ಜನತಾ ಪಕ್ಷದ ಸಂಘಟನೆಯಲ್ಲಿ ಸುಮಾರು 37 ವರ್ಷಗಳ ಕಾಲ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿನವರೆಗೆ ಕರ್ನಾಟಕ ಬಿಜೆಪಿ ಶಿಸ್ತು ಸಮಿತಿಯ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ವಿಧಾನ ಪರಿಷತ್ ಚುನಾವಣೆಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ, ತಮಗೆ ಅನ್ಯಾಯವಾಗಿದೆ ಎಂದು ಬೇಸರಗೊಂಡು ಕಳೆದ ಮಾರ್ಚಿನಲ್ಲಿ ತಮ್ಮ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದಾಗ್ಯೂ, ಇವರು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯುವುದಾಗಿ ಘೋಷಿಸಿದ್ದರು.
ಪರಿಷತ್‌ಗೆ ಕೊನೇ ಕ್ಷಣದಲ್ಲಿ ಜೆಡಿಎಸ್ ಕಣಕ್ಕೆ?
ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಬೇಕಿರುವ 7 ಸ್ಥಾನಗಳಿಗೂ ಸೋಮವಾರವೇ ನಾಮಪತ್ರ ಸಲ್ಲಿಕೆ ಆಗಬೇಕಿದ್ದು ಜೆಡಿಎಸ್ ಪರಿಷತ್ ಹಾಲಿ ಸದಸ್ಯ ಗೋವಿಂದರಾಜು ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಪ್ರತಿ ಅಭ್ಯರ್ಥಿ ಗೆಲುವಿಗೆ ತಲಾ 28 ಕೋಟಾ ಮತಗಳು ಬೇಕಾಗಿದ್ದು ಕಾಂಗ್ರೆಸ್ 4 ಹಾಗೂ ಬಿಜೆಪಿ 2 ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದು. ಆದರೆ, 7ನೇ ಅಭ್ಯರ್ಥಿ ಗೆಲುವಿಗೆ ಯಾರಲ್ಲಿಯೂ ಪೂರ್ಣ ಮತ ಇಲ್ಲ.
4 ಅಭ್ಯರ್ಥಿಗಳ ಗೆಲುವಿನ ನಂತರ ಕಾಂಗ್ರೆಸ್ ಬಳಿ 26 ಮತಗಳು ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಬಳಿ 25 ಮತಗಳಿವೆ. ಬಿಜೆಪಿಯಿಂದ ಉಚ್ಚಾಟಿತ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಪರ ಮತ ಚಲಾಯಿಸುತ್ತಾರೆ ಎನ್ನಲಾಗಿದ್ದು ಅಲ್ಲಿಗೆ 5ನೇ ಅಭ್ಯರ್ಥಿಯೂ ಗೆಲ್ಲಬಹುದು. ಈಗಾಗಲೆ ಕೆಪಿಸಿಸಿ ಖಜಾಂಚಿ ವಿನಯ್ ಕಾರ್ತಿಕ್ ಹೆಸರನ್ನು ಕಾಂಗ್ರೆಸ್ ಘೊಷಿಸಿದೆ. ಅವರಿನ್ನೂ ನಾಮಪತ್ರ ಸಲ್ಲಿಸಬೇಕಾಗಿದೆ. ಅಧಿಕೃತವಾಗಿ ಕಾಂಗ್ರೆಸ್ ಬಳಿಯೂ ಕೊನೆಯ ಅಭ್ಯರ್ಥಿ ಗೆಲುವಿಗೆ ಮತಗಳಿಲ್ಲ. ಎನ್‌ಡಿಎ ಮಿತ್ರಕೂಟದಿಂದ ಕೊನೆಯದಾಗಿ ಇಳಿಯುವ ಅಭ್ಯರ್ಥಿಗೂ ಮತಗಳ ಕೊರತೆ ಇದೆ. ಈ ಕೊರತೆ ನೀಗಿಸಲು ಕಾಂಗ್ರೆಸ್ ಹಾಗೂ ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ಶಾಸಕರು ಯಾವ 'ಸೂತ್ರ'ದಡಿ ಮತದಾನ ಮಾಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಗುಪ್ತ ಮತದಾನದ ಲಾಭ
ವಿಧಾನಸಭೆ ಚುನಾವಣೆಯು ಗುಪ್ತ ಮತದಾನವಾಗಿದೆ. ಎಲ್ಲ ಪಕ್ಷಗಳೂ ತನ್ನದೇ ಅಭ್ಯರ್ಥಿಗೆ ಮತ ಚಲಾಯಿಸುವಂತೆ ವಿಪ್ ಹೊರಡಿಸುತ್ತವೆಯಾದರೂ ತನ್ನ ಅಭ್ಯರ್ಥಿಗೆ ಮತ ಚಲಾಯಿಸದಿದ್ದರೆ ಪತ್ತೆ ಹಚ್ಚಲು ಅಥವಾ ದಂಡಿಸಲು ಅವಕಾಶ ಇಲ್ಲ. ಹೀಗಾಗಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಚುನಾವಣೆ ಕಣ ರಂಗೇರಲಿದೆ. ಮತ್ತೊಮ್ಮೆ ‘ಆತ್ಮಸಾಕ್ಷಿಯ ಮತ’, ಅಡ್ಡಮತದಾನದಂತಹ ವಿಚಾರಗಳು ಚರ್ಚೆಗೆ ಬರಲಿದೆ. ಒಂದು ವೇಳೆ ಕಣದಲ್ಲಿ ಏಳೇ ಅಭ್ಯರ್ಥಿಗಳು ಉಳಿದರೆ ಚುನಾವಣೆಯೇ ಇಲ್ಲದೆ ಸರ್ವಾನುಮತದಿಂದ ಆಯ್ಕೆಯನ್ನು ಘೋಷಣೆ ಮಾಡಲಾಗುತ್ತದೆ.
ಪಕ್ಷಗಳ ಬಲಾಬಲ ಸಾಧ್ಯತೆ
ಕಾಂಗ್ರೆಸ್ ಗುಂಪು
ಕಾಂಗ್ರೆಸ್-135
ಎಸ್‌ಕೆಪಿ-1
ಪಕ್ಷೇತರ-2
ಬಿಜೆಪಿಯಿಂದ ಉಚ್ಚಾಟಿತರು (ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್)-2
ಒಟ್ಟು-140
---
ಬಿಜೆಪಿ ಗುಂಪು
ಬಿಜೆಪಿ-62
ಜೆಡಿಎಸ್-18
ಕೆಆರ್‌ಪಿಪಿ-1
ಬಿಜೆಪಿಯಿಂದ ಉಚ್ಚಾಟಿತ (ಯತ್ನಾಳ್)-1
ಒಟ್ಟು-82
ಖಾಲಿ-2
ಒಟ್ಟು ಸ್ಥಾನ-224
