ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ, ಭೌಗೋಳಿಕ ರಾಜಕೀಯ ಅನಿಶ್ಚಿತತೆ ಮತ್ತು ಅಮೆರಿಕನ್ ಡಾಲರ್‌ನ ಬಲವರ್ಧನೆಯಿಂದಾಗಿ ಭಾರತೀಯ ರೂಪಾಯಿ ಮೌಲ್ಯವು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ದಾಖಲೆಯ ಕುಸಿತ ಕಂಡಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 44 ಪೈಸೆ ಕುಸಿದು, 96.25 ರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯ ತಜ್ಞರ ಪ್ರಕಾರ, ಕಚ್ಚಾ ತೈಲ ಬೆಲೆ ಹೆಚ್ಚಳ, ಬಲವಾದ ಅಮೆರಿಕ ಡಾಲರ್ ಮತ್ತು ನಡೆಯುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಒಟ್ಟಾಗಿ ಮಾರುಕಟ್ಟೆಗಳ ಕರೆನ್ಸಿಗಳ ಮೇಲೆ ತೀವ್ರ ಒತ್ತಡ ಹೇರಿದ್ದು, ಭಾರತೀಯ ರೂಪಾಯಿಯಲ್ಲೂ ಈ ಒತ್ತಡ ಎದ್ದು ಕಾಣುತ್ತಿದೆ.
ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರ ರೂಪಾಯಿ ಮೌಲ್ಯ 96.19 ರಲ್ಲಿ ಆರಂಭವಾಯಿತು. ತದನಂತರ ಕಳೆದ ವಾರದ ಮುಕ್ತಾಯದ ದರಕ್ಕೆ ಹೋಲಿಸಿದರೆ 44 ಪೈಸೆ ಕುಸಿತ ಕಂಡು 96.25 ತಲುಪಿತು. ಕಳೆದ ಶುಕ್ರವಾರವಷ್ಟೇ ರೂಪಾಯಿ ಮೌಲ್ಯ ಮೊದಲ ಬಾರಿಗೆ 96 ರ ಗಡಿ ದಾಟಿ, 95.81 ರ ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿ ಸ್ಥಿರವಾಗಿತ್ತು.
ವಿಶ್ವದ ಪ್ರಮುಖ ಆರು ಕರೆನ್ಸಿಗಳ ಎದುರು ಡಾಲರ್‌ನ ಬಲವನ್ನು ಅಳೆಯುವ ‘ಡಾಲರ್ ಇಂಡೆಕ್ಸ್’, ಇರಾನ್ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಶೇ. 0.04 ರಷ್ಟು ಏರಿಕೆ ಕಂಡು 99.32 ಕ್ಕೆ ತಲುಪಿದೆ.
ಜಾಗತಿಕ ತೈಲ ಬೆಲೆಯ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ದರವು ಫ್ಯೂಚರ್ಸ್ ವಹಿವಾಟಿನಲ್ಲಿ ಶೇ. 1.83 ರಷ್ಟು ಏರಿಕೆಯಾಗಿ ಬ್ಯಾರೆಲ್‌ಗೆ $111.26 ತಲುಪಿದೆ.
ಬೆಳ್ಳಿ ಆಮದಿಗೆ ಸರ್ಕಾರದ ಬ್ರೇಕ್, ಸುಂಕ ಹೆಚ್ಚಳ:
ಅನಗತ್ಯ ಆಮದನ್ನು ನಿಯಂತ್ರಿಸಿ ವಿದೇಶಿ ವಿನಿಮಯದ ಹೊರಹರಿವನ್ನು ತಡೆಯಲು ಸರ್ಕಾರ ಶನಿವಾರದಿಂದ ಜಾರಿಗೆ ಬರುವಂತೆ ಬೆಳ್ಳಿ ಆಮದಿನ ಮೇಲೆ ನಿಯಂತ್ರಣ ಹೇರಿದ್ದು, ಇನ್ಬೌಂಡ್ ಶಿಪ್ಮೆಂಟ್ಗಳನ್ನು ಲೈಸೆನ್ಸ್ ಆಡಳಿತದಡಿ ತಂದಿದೆ. ಇದಕ್ಕೂ ಮುನ್ನ ಮೇ 13 ರಂದು ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ. 6 ರಿಂದ ಶೇ. 15 ಕ್ಕೆ ಹೆಚ್ಚಿಸಿತ್ತು. ಪ್ರಸ್ತುತ ಶೇ. 3 ರ ಜಿಎಸ್‌ಟಿ ಸೇರಿ ಪರಿಣಾಮಕಾರಿ ಆಮದು ಸುಂಕವು ಶೇ. 18 ಕ್ಕಿಂತ ಹೆಚ್ಚಾಗಿದೆ.
