ಬೆಳಗಾವಿ : 3,000ಕ್ಕೂ ಅಧಿಕ ಜನರಿಂದ 160 ಕೋಟಿ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ನಡೆಸಿದ ಆರೋಪಕ್ಕೆ ಸಂಬಂಧಿಸಿ ಟಿಳಕವಾಡಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಜುಲೈ 13ರಂದು ಕೌಜಲಗಿ ಗ್ರಾಮದ ಅಶೋಕ ವಿರುಪಾಕ್ಷಿ ಅಸಗುಪ್ಪಿ ಅವರು ನೀಡಿದ ದೂರಿನ ಆಧಾರದ ಮೇಲೆ ಬೆಳಗಾವಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೆಳಗಾವಿಯ ಮಂಗಳವಾರ ಪೇಠದ ರೇಣುಕಾ ನಿವಾಸ ಅಪಾರ್ಟ್‌ಮೆಂಟ್‌ನ ಮೊದಲ ಮಹಡಿಯಲ್ಲಿ APPEXX BIZCORP LLP ಎಂಬ ಟ್ರೇಡಿಂಗ್ ಕಂಪನಿ ನಡೆಸುತ್ತಿದ್ದ ಆರೋಪಿಗಳು, ಸಾರ್ವಜನಿಕರಿಂದ ಸುಮಾರು 160 ಕೋಟಿ ಹಣವನ್ನು ಹೂಡಿಕೆ ರೂಪದಲ್ಲಿ ಸಂಗ್ರಹಿಸಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಸಂಗ್ರಹಿಸಿದ ಹಣವನ್ನು ಷೇರು ಮಾರುಕಟ್ಟೆ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದು, ವಿವಿಧ ಸ್ಥಿರಾಸ್ತಿಗಳನ್ನು ಖರೀದಿಸುವುದು ಸೇರಿದಂತೆ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿ ನೀಡುವುದಾಗಿ ಆಮಿಷವೊಡ್ಡಿ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.