ಬೆಳಗಾವಿ: ಲೋಕಸಭಾ ಸದಸ್ಯ ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹುಬ್ಬಳ್ಳಿ ನೈರುತ್ಯ ರೇಲ್ವೆ ಮಹಾ ಪ್ರಬಂಧಕ ಕೆ. ಅನಂತ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಡೆಸಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಕುರಿತು ಸಾಧಿಸಲಾದ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಿದರು.
ಬೆಳಗಾವಿ-ಕಿತ್ತೂರು-ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣ :
ಪ್ರಸ್ತಾಪಿತ ವಿಷಯವಾಗಿ ಚರ್ಚಿಸಲಾಗಿ, ನೂತನ ರೈಲು ಮಾರ್ಗ ನಿರ್ಮಾಣಕ್ಕೆ ರಾಜ್ಯ ಸರಕಾರದಿಂದ ಇನ್ನೂವರೆಗೂ ನೈರುತ್ಯ ರೇಲ್ವೆ ಅಧಿಕಾರಿಗಳಿಗೆ ಭೂಮಿ ಹಸ್ತಾಂತರ ಮಾಡುವ ಕಾರ್ಯವಾಗಲಿ ನಡೆದಿಲ್ಲ, ಈ ಕಾರಣಕ್ಕಾಗಿ ಕಾಮಗಾರಿ ಅನುಷ್ಠಾನದಲ್ಲಿ ತಡೆ ಉಂಟಾಗಿದೆ ಎಂದು ಅಧಿಕಾರಿಗಳು ಸಂಸದರ ಗಮನಕ್ಕೆ ತಂದರು.
ಈ ವಿಷಯವಾಗಿ ಈಗಾಗಲೇ ಬೆಳಗಾವಿ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗಿದ್ದು, ಅದರಂತೆ ಅಂದಾಜು 1430 ಎಕರೆ ಜಮೀನು ಈ ಮಾರ್ಗದಲ್ಲಿ ಭೂಸ್ವಾಧೀನಕ್ಕೆಂದು ಗುರುತಿಸಲಾಗಿದ್ದು, ರಾಜ್ಯ ಸರಕಾರದಿಂದ ಇದುವರೆಗೆ ರೈತರಿಗೆ ಪರಿಹಾರಧನ ವಿತರಿಸುವುದಾಗಲಿ ಅಥವಾ ರೇಲ್ವೆ ಇಲಾಖೆಗೆ ಭೂಮಿ ಹಸ್ತಾಂತರ ಮಾಡುವ ಕಾರ್ಯವಾಗಲಿ ನಡೆದಿಲ್ಲ. ಇದರಿಂದಾಗಿ ಕಾಮಗಾರಿ ಅನುಷ್ಠಾನದಲ್ಲಿ ತಡೆ ಉಂಟಾಗಿದೆ ಈ ಬಗ್ಗೆ ರಾಜ್ಯ ಸರಕಾರದ ಅಗತ್ಯ ಗಮನ ಸಳೆಯಲು ಶ್ರಮಿಸಲಾಗುವುದು ಎಂದು ಸಂಸದರು ಸಭೆಯಲ್ಲಿ ತಿಳಿಸಿದರು.
ಬೆಳಗಾವಿ-ಗೋಕಾಕ-ಯಾದವಾಡ ಮಾರ್ಗದಲ್ಲಿ ನೂತನ ರೈಲು ಮಾರ್ಗ ನಿರ್ಮಾಣ:-
ಈ 65 ಕಿ.ಮಿ ರೈಲು ಮಾರ್ಗ ನಿರ್ಮಾಣ ಅತ್ಯಂತ ಅವಶ್ಯಕ, ಪ್ರಸ್ತಾಪಿತ ಮಾರ್ಗದಲ್ಲಿ ಹಲವಾರು ಸಿಮೆಂಟ್ ಉದ್ಯಮಗಳು, ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಲ್ಲಿವೆ. ಸಾರ್ವಜನಿಕರ ಹಾಗೂ ಉದ್ಯಮದಾರರ ಬೇಡಿಕೆಯಂತೆ ಪುನಃ ಮನವಿಯನ್ನು ರೇಲ್ವೆ ಬೋರ್ಡ್ ಅಧಿಕಾರಿಗಳಿಗೆ ಕಳುಹಿಸುವಂತೆ ಸಂಸದರು ರೇಲ್ವೆ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕನುಗುಣವಾಗಿ ತಾವು ರೇಲ್ವೆ ಸಚಿವರೊಂದಿಗೆ ಚರ್ಚಿಸಿ, ಒಪ್ಪಿಗೆ ಪಡೆಯುವ ಬಗ್ಗೆ ಪ್ರಯತ್ನ ಮಾಡುವುದಾಗಿ ಸಂಸದರು ತಿಳಿಸಿದರು.
ಲೋಕಾಪುರ- ರಾಮದುರ್ಗ-ಸವದತ್ತಿ-ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣ:
ಪ್ರಸ್ತಾಪಿತ ಮಾರ್ಗದಲ್ಲಿ ರೈಲು ಮಾರ್ಗ ನಿರ್ಮಾಣ ಸಾರ್ವಜನಿಕರ ಅನೇಕ ವರ್ಷಗಳ ಬೇಡಿಕೆ ಸವದತ್ತಿ ಶ್ರೀ ರೇಣುಕಾದೇವಿ ದರ್ಶನಕ್ಕೆ ಪ್ರತಿ ವರ್ಷ ಸುಮಾರು ಎರಡು ಕೋಟಿ ಭಕ್ತಾದಿಗಳು ಪೂಣ್ಯ ಕ್ಷೇತ್ರಕ್ಕೆ ಆಗಮಿಸುತ್ತಿರುತ್ತಾರೆ. ಪ್ರಥಮ ಹಂತವಾಗಿ ಈ ಮಾರ್ಗದ ಸಮೀಕ್ಷೆ ಕಾರ್ಯ ಕೈಗೊಳ್ಳುವಂತೆ ಸಂಸದರು ಪ್ರಸ್ತಾಪಿಸಿದರು. ಇದಕ್ಕೆ ತಗಲುವ ವೆಚ್ಚ ಅಂದಾಜು ರೂ: 70 ಲಕ್ಷ, ಇದಕ್ಕೆ ರೇಲ್ವೆ ಬೋರ್ಡ್ ಒಪ್ಪಿಗೆ ಪಡೆಯಲು ತಿಳಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಸ್ತಾವನೆ ರೇಲ್ವೆ ಬೋರ್ಡ್ ಅಧಿಕಾರಿಗಳ ಹಂತದಲ್ಲಿರುವ ವಿಷಯ ಸಂಸದರಿಗೆ ತಿಳಿಸಲಾಗಿ, ಈ ಬಗ್ಗೆ ಮತ್ತೊಮ್ಮೆ ನೆನಪೋಲೆ ಕಳುಹಿಸಲು ರೇಲ್ವೆ ಅಧಿಕಾರಿಗಳಲ್ಲಿ ಸಂಸದರು ಸೂಚಿಸಿದರು.
ಪಿ.ಎಂ ಅಮೃತ್ ಭಾರತ ಸ್ಟೇಶನ್ :
ಈ ಯೋಜನೆಯಡಿ ಬೆಳಗಾವಿ ಮತ್ತು ಘಟಪ್ರಭಾ ರೇಲ್ವೆ ಸ್ಟೇಶನ್‌ದಲ್ಲಿ ನಡೆಸಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳು ನಿಧಾನವಾಗಿ ಸಾಗಿತ್ತಿರುವ ಬಗ್ಗೆ ಸಂಸದರು ತಮ್ಮ ಕಳವಳ ವ್ಯಕ್ತ ಪಡೆಸಿದರು. ಈ ಕುರಿತು ವೇಗ ಕಾಯ್ದುಕೊಳ್ಳುವ ಬಗ್ಗೆ ರೇಲ್ವೆ ಮಹಾ ಪ್ರಬಂಧಕರು ತಮ್ಮ ಅಧಿಕಾರಿಗಳಿಗೆ ಸೂಚಿಸಿದರು.
ಸಾಂಬ್ರಾ ಹಾಗೂ ದೇಸೂರ ರೈಲು ನಿಲ್ದಾಣ ಪರ್ಯಾಯ ನಿಲ್ದಾಣವಾಗಿ ಅಭಿವೃದ್ಧಿ ಮಾಡುವ ಬಗ್ಗೆ :
ಬೆಳಗಾವಿ ರೇಲ್ವೆ ನಿಲ್ದಾಣಕ್ಕೆ ಪರ್ಯಾಯವಾಗಿ ಸಾಂಬ್ರಾ ಅಥವಾ ದೇಸೂರ ರೇಲ್ವೆ ನಿಲ್ದಾಣವನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಚರ್ಚಿಸಲಾಗಿ, ಬರುವ ದಿನಗಳಲ್ಲಿ ಈ ಬಗ್ಗೆ ಗಮನ ನೀಡುವುದಾಗಿ ಅಧಿಕಾರಿಗಳು ಸಂಸದರಿಗೆ ತಿಳಿಸಿದರು.
ಬೆಳಗಾವಿ-ಮನಗೂರು ನಡುವೆ ಪುನಃ ರೇಲ್ವೆ ಸಂಚಾರ ಪ್ರಾರಂಭವಿಸುವ ಬಗ್ಗೆ ಚರ್ಚಿಸಲಾಗಿ, ಈ ಕುರಿತು ಸಿಕಂದರಾಬಾದ, ಹೈದರಾಬಾದ ಹಾಗೂ ಚಾರ್ಲಪಲ್ಲಿ ನಡುವೆ ರೈಲು ಸಂಚಾರವನ್ನು ಬೆಳಗಾವಿಯಿಂದ ನಡೆಸಲಾಗುವ ಬಗ್ಗೆ ಸಂಸದರ ಗಮನಕ್ಕೆ ತರಲಾಯಿತು.
ಬೆಂಗಳೂರು -ಮುಂಬೈ ನಡುವೆ ನೂತನ ರೈಲು ಸಂಚಾರ ಪ್ರಾರಂಭದ ಬಗ್ಗೆ ವಿಚಾರಿಸಲಾಗಿ, ಈ ವಿಷಯ ಈಗಾಗಲೇ ಕೇಂದ್ರ ರೇಲ್ವೆ ಸಚಿವಾಲಯದ ಬಳಿ ಇದ್ದು, ಶೀಘ್ರ ಅನುಮೋದನೆ ಸಿಗಲಿರುವ ವಿಚಾರ ಸಂಸದರ ಗಮನಕ್ಕೆ ತರಲಾಯಿತು.
ಇದರ ಪ್ರಾರಂಭದಿಂದ ಬೆಂಗಳೂರು ಮತ್ತು ಮುಂಬೈ ನಡುವಿನ ಬೆಳಗಾವಿ ಮಾರ್ಗವಾಗಿ ಸಂಚಾರ ಕೇವಲ 23 ಗಂಟೆಯಲ್ಲಿ ಪೂರ್ಣಗೊಳ್ಳುವುದು ಎಂದು ಸಂಸದರ ಗಮನಕ್ಕೆ ವಿಷಯ ತರಲಾಯಿತು.
ಅದರಂತೆ ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ಅವರ ಅನೇಕ ದಿನಗಳ ಬೇಡಿಕೆಯಂತೆ ಬೆಳಗಾವಿ-ಲೋಂಡಾ- ಗೋವಾ ಮಧ್ಯ ಸಹ ನೂತನ ರೈಲು ಸಂಚಾರ ಪ್ರಾರಂಭಿಸುವ ಬಗ್ಗೆ ಸಂಸದರು ರೇಲ್ವೆ ಅಧಿಕಾರಿಗಳಿಗೆ ತಿಳಿಸಿದರು.
