ಬೆಂಗಳೂರು: ದೇಶದಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆ ಆರಂಭವಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಸಂಜೆ ಮಳೆ ಸುರಿಯುತ್ತಿದೆ.
ಈ ನಡುವೆ, ಮೇ ತಿಂಗಳಿನಲ್ಲಿ ದೇಶದಾದ್ಯಂತ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ ನಲ್ಲಿ ಸುರಿಯುವ ಮಳೆಯು ದೀರ್ಘಾವಧಿಯ ಸರಾಸರಿಗಿಂತ 110 ಪ್ರತಿಶತಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ.
ಮಳೆಯಿಂದಾಗಿ ಉತ್ತರ ಭಾರತ ಮತ್ತು ಮಧ್ಯ ಭಾರತದ ಹಲವು ಭಾಗಗಳಲ್ಲಿ ತಾಪಮಾನ ಇಳಿಕೆಯಾಗಲಿದೆ. ಪಶ್ಚಿಮ ಬಂಗಾಳ, ಸಿಕ್ಕಿಂ, ಈಶಾನ್ಯ ರಾಜ್ಯಗಳಲ್ಲಿ ಮೇ 5ರವರೆಗೆ ಗುಡುಗು ಸಹಿತ ಮಳೆಯಾಗಲಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಲಿದೆ ಎಂದು ಇಲಾಖೆ ಹೇಳಿದೆ.
ಗುಜರಾತ್, ಮಹಾರಾಷ್ಟ್ರ, ಹಿಮಾಲಯದ ತಪ್ಪಲು ಪ್ರದೇಶ, ಕರಾವಳಿ ರಾಜ್ಯಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ಇರಲಿದೆ. ಮೇ 8–14 ಮತ್ತು ಮೇ 22–28 ರ ನಡುವೆ ಗರಿಷ್ಠ ತಾಪಮಾನ ದಾಖಲಾಗುವ ನಿರೀಕ್ಷೆಯಿದೆ.
ರಾಜ್ಯದಲ್ಲಿ ಪ್ರಮುಖವಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ ಕೆಲವು ಭಾಗಗಳಲ್ಲಿ ಸಾಮಾನ್ಯ ಮಳೆಯಾಗಲಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಾದ ಗದಗ, ಬಳ್ಳಾರಿ, ರಾಯಚೂರು, ಕಲಬುರಗಿ, ವಿಜಯಪುರವನ್ನೂ ಒಳಗೊಂಡು ದಕ್ಷಿಣ ಭಾಗದ ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಸುರಿಯಲಿದೆ.
ಮೇ ನಲ್ಲಿ ಸುರಿಯುವ ಮಳೆಯು ಬೇಸಿಗೆ ಬೆಳೆಗಳ ಮೇಲೆ ಪರಿಣಾಮ ಬೀರಲಿದೆ. ಜೋಳ, ಹತ್ತಿ ಸೇರಿದಂತೆ ಮುಂಗಾರು ಬೆಳೆಗಳಿಗೆ ಹಾನಿಯಾಗಲಿದೆ. ಅಲ್ಲದೆ ಮಳೆಯ ನಂತರ ಹೆಚ್ಚಾಗುವ ತೇವಾಂಶ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಬೆಳೆಗಳಿಗೆ ಕೀಟಬಾಧೆ ಮತ್ತು ಶಿಲೀಂಧ್ರ ರೋಗಗಳು ಹರಡುವ ಸಾಧ್ಯತೆಯೂ ಹೆಚ್ಚಿರಲಿದ್ದು, ಮುನ್ನೆಚ್ಚರಿಕೆವಹಿಸಬೇಕೆಂದು ಹವಾಮಾನ ಇಲಾಖೆ ಸೂಚಿಸಿದೆ.
