ಬಾಗಲಕೋಟೆ/ ದಾವಣಗೆರೆ : ಕರ್ನಾಟಕದಲ್ಲಿ ನಡೆದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಜಯಗಳಿಸಿದೆ. ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಗೆಲುವಿನ ನಗೆ ಬೀರಿದರೆ ದಾವಣಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಅವರು ಜಯಗಳಿಸಿದ್ದಾರೆ.
ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ (Bagalakot) ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಎಚ್.ವೈ.ಮೇಟಿ ಅವರ ಮಗ ಉಮೇಶ ಮೇಟಿ ಅವರಿಗೆ ಟಿಕೆಟ್ ನೀಡಿತ್ತು. ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಉಮೇಶ ಮೇಟಿ ಗೆಲ್ಲುವ ಮೂಲಕ ಕ್ಷೇತ್ರವನ್ನು ಮರಳಿ ಕಾಂಗ್ರೆಸ್ ತನ್ನ ತೆಕ್ಕೆಗೆ ಪಡೆದುಕೊಂಡಿದೆ.
ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರಿಗೆ 97,941 ಮತಗಳು ಬಿದ್ದರೆ ಬಿಜೆಪಿ ಅಭ್ಯರ್ಥಿಯಾಗಿದ್ದ ವೀರಣ್ಣ ಚರಂತಿಮಠ ಅವರಿಗೆ 76,075 ಮತಗಳು ಬಿದ್ದವು. ಉಮೇಶ ಮೇಟಿ ಅವರು ೨೧೮೮೬ ಮತಗಳಾಂತರದಿಂದ ಜಯಗಳಿಸಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸಮರ್ಥ ಶಾಮನೂರು ಅವರು 5,708 ಮತಗಳ ಅಂತರಿಂದ ಜಯಗಳಿಸಿದ್ದಾರೆ. ಶಾಮನೂರು ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ಈ ಕ್ಷೇತ್ರ ತೆರವಾಗಿತ್ತು. ಕಾಂಗ್ರೆಸ್ ಪಕ್ಷವು ಶಾಮನೂರು ಅವರ ಮೊಮ್ಮಗ ಸಮರ್ಥ ಶಾಮನೂರು ಅವರಿಗೆ ಟಿಕೆಟ್ ನೀಡಿತ್ತು. ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದ ಸಮರ್ಥ ನಂತರ ಮುನ್ನಡೆ ಪಡೆದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ ಕರಿಯಪ್ಪ ಅವರನ್ನು ಸೋಲಿಸಿದ್ದಾರೆ. ಸಮರ್ಥ ಶಾಮನೂರು ಅವರಿಗೆ 69,578 ಮತಗಳು ಬಿದ್ದರೆ, ಬಿಜೆಪಿಯ ಶ್ರೀನಿವಾಸ ಟಿ.ದಾಸ ಕರಿಯಪ್ಪ 63,870 ಮತಗಳನ್ನು ಪಡೆದರು.
