Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಅಂತರರಾಷ್ಟ್ರೀಯ ಯೋಗ ದಿನಾಚರಣೆ 2025: ಯೋಗ ಬದುಕಿನ ದಾರಿ..

ಯೋಗ ಬದುಕನ್ನು ಹೇಗೆ ಬದುಕಬೇಕು ಎನ್ನುವ ಕುರಿತಾಗಿ ಮನುಕುಲದ ಬೇರೆ ಬೇರೆ ನಾಗರಿಕತೆಗಳು ತಮ್ಮದೇ ಆದ ಚಿಂತನೆಗಳನ್ನು ಬೆಳೆಸಿಕೊಂಡವು. ಆದರೆ ಭೌತಿಕ ಮತ್ತು ಸಾಂಸ್ಕೃತಿಕ ದಾಳಿಗಳಿಂದಾಗಿ ಬಹುತೇಕ ಮಾನವ ಸಮುದಾಯಗಳು ತಮ್ಮ ಪ್ರಾಚೀನ ಚಿಂತನೆಗಳನ್ನು ಮರೆಯುವಂತಾಯಿತು. ಭಾರತದ ಭಾಗ್ಯವೆಂದರೆ, ನಮ್ಮ ಮೇಲೆ ನಡೆದ ಎಲ್ಲ ಬಗೆಯ ದಾಳಿಗಳ ಹೊರತಾಗಿಯೂ ಈ ಮಣ್ಣಿನ ಮಹಿಮೆಯೋ ಎಂಬಂತೆ ಪ್ರಾಚೀನ ಕಾಲದ ಚಿಂತನೆಗಳು ಉಳಿದುಕೊಂಡು ಬಂದಿವೆ ಎಂಬುದು. ಅವುಗಳಲ್ಲಿ ಕೆಲವಂತೂ ನಾವು ಬದುಕಿರುವ ಈ ಕಾಲದಲ್ಲಿ ಇನ್ನಷ್ಟು ಹೊಳಪನ್ನು ಪಡೆದುಕೊಂಡು ಪ್ರವರ್ಧಮಾನಕ್ಕೆ ಬರುತ್ತಿವೆ. ಅದರಲ್ಲಿ ಯೋಗಶಾಸ್ತ್ರವೂ ಸೇರಿದೆ.

ಭಾರತದ ನಾನಾ ಪರಂಪರೆಗಳಲ್ಲಿ ಪ್ರಚುರವಾಗಿದ್ದ ಚಿಂತನೆಗಳನ್ನೆಲ್ಲ ಒಟ್ಟಂದದಲ್ಲಿ ಸೇರಿಸಿ ಯೋಗಸೂತ್ರಗಳ ರೂಪದಲ್ಲಿ ಕೊಡಮಾಡಿದವರು ಪತಂಜಲಿ ಮಹರ್ಷಿಗಳು. ಸಾಮಾನ್ಯ ಶಕಪೂರ್ವದ ಮೊದಲನೆಯ ಶತಮಾನವು ಇವರ ಕಾಲವಾಗಿದ್ದಿರಬಹುದೆಂದು ಇತಿಹಾಸಕಾರರು ಗುರುತಿಸುತ್ತಾರೆ. ಅಲ್ಲಿಂದಾಚೆಗೆ ಯೋಗವು ನಮ್ಮ ಆರು ಆಸ್ತಿಕ ದರ್ಶನಗಳ ಸಾಲಿನಲ್ಲಿ ಒಂದಾಗಿ ಗುರುತಾಗುತ್ತದೆ. ಪತಂಜಲಿ ಮಹರ್ಷಿಗಳು ಪ್ರಸ್ತಾವಿಸಿದ ನೂರತೊಂಬತ್ತಾರು ಸೂತ್ರಗಳಿರುವ ಈ ಯೋಗಶಾಸ್ತ್ರದಲ್ಲಿ ಮುಖ್ಯವಾಗಿ ಎಂಟು ಅಂಗಗಳು ಇರುವುದರಿಂದ ಅದು ‘ಅಷ್ಟಾಂಗಯೋಗ’ ಎನ್ನಿಸಿಕೊಳ್ಳುತ್ತದೆ. ಎಲ್ಲ ದರ್ಶನಗಳಂತೆ ಯೋಗದರ್ಶನದ ಉದ್ದೇಶವೂ ಮೋಕ್ಷವೇ. ಇಲ್ಲಿ ಮೋಕ್ಷಕ್ಕೆ ಸಂವಾದಿಯಾಗಿ ಬರುವಂಥದು ಚಿತ್ತವೃತ್ತಿ ನಿರೋಧದ ಮೂಲಕ ಗಳಿಸಲಾಗುವ ‘ಸಮಾಧಿ’ ಎಂಬ ಸ್ಥಿತಿ. ನಮಗೆ ಇಂದು ಯೋಗ ಎಂದಾಕ್ಷಣ ಮನಸ್ಸಿಗೆ ಬರುವ ಆಸನ, ಪ್ರಾಣಾಯಾಮಗಳೆಲ್ಲ ಸಮಾಧಿಯೆಂಬ ಗುರಿಯ ಸಾಧನೆಗೆ ಒತ್ತಾಸೆಯಾಗಿ ಬರುವಂಥ ಉಪಾಂಗಗಳು.

 

ನಾವು ಬದುಕಿರುವ ಈ ಕಾಲದಲ್ಲಿ ಮೋಕ್ಷ, ಸಮಾಧಿ, ಆತ್ಯಂತಿಕ ದುಃಖನಿವೃತ್ತಿ, ನಿರ್ವಾಣ ಎಂಬ ಕಾರಣಗಳಿಗೆ ಅಲ್ಲದೆ ಒಳ್ಳೆಯ ಬದುಕಿನ ಮಾದರಿಗಾಗಿ ನಾವು ಯೋಗವೇ ಮೊದಲಾದ ದರ್ಶನಗಳನ್ನು ಎದುರುನೋಡುತ್ತೇವೆ. ಅಂದರೆ ನಮಗೆ ಯೋಗವು ಇವತ್ತಿಗೆ ಒದಗಿಬರುತ್ತಿರುವುದು ಉತ್ತಮ ಗುಣಮಟ್ಟದ ಬದುಕಿನ ಹಾದಿಯ ಕೈದೀವಿಗೆಯಾಗಿ. ಇರುವಷ್ಟು ಬದುಕಿನ ಶಕ್ತಿಯನ್ನು ಕೆಲವೇ ಕಾಲದಲ್ಲಿ ವ್ಯಯಿಸಿ ಉಳಿದ ಬದುಕನ್ನು ನಿಸ್ಸಾರವಾಗಿ ಬದುಕುವುದಕ್ಕಿಂತ, ಪ್ರಕೃತಿಯು ಕೊಡಮಾಡಿರುವ ಶಕ್ತಿಯನ್ನು ನಿಯಮಿತವಾಗಿ ಬಳಸುತ್ತ, ಬೆಳೆಸುತ್ತ ಒಂದು ಸಹಜ, ಶುದ್ಧ, ಶಾಂತ ಬದುಕನ್ನು ಸಾಧ್ಯಮಾಡಿಕೊಳ್ಳುವುದು ಹೇಗೆ ಎನ್ನುವುದಕ್ಕೆ ಯೋಗದಲ್ಲಿ ಉತ್ತರವಿದೆ. ಯೋಗ ಎನ್ನುವುದು ಬರಿಯ ಆಸನ ಪ್ರಾಣಾಯಾಮ ಧ್ಯಾನವಷ್ಟೇ ಅಲ್ಲ; ಅದೊಂದು ದರ್ಶನ; ಎಂದರೆ ಕಾಣ್ಕೆ. ಅದೊಂದು ಬದುಕಿನ ಮಾರ್ಗ. ಸರಳವಾಗಿ ಹೇಳಬೇಕೆಂದರೆ ಬೇಕಾಬಿಟ್ಟಿ ಬದುಕಿ ಮತ್ತೆ ಬೆಳಿಗ್ಗೆ ಎದ್ದು ಯೋಗಾಸನ ಪ್ರಾಣಾಯಾಮದ ಮೂಲಕ ಎಲ್ಲವನ್ನೂ ಸರಿಮಾಡಿಕೊಳ್ಳುತ್ತೇನೆ ಎಂಬುದು ಯೋಗದ ದೃಷ್ಟಿ ಅಲ್ಲ. ಹಾಗಾಗಿ ಜಿಮ್, ವರ್ಕೌಟ್, ಫಿಟ್ನೆಸ್ ಪ್ರಾಕ್ಟೀಸ್ ಇತ್ಯಾದಿಗಳನ್ನು ನೋಡುವಂತೆ ಯೋಗವನ್ನು ನೋಡಲಾಗದು.

ಅನೂಚಾನವಾಗಿ, ಸಣ್ಣ ಪ್ರಮಾಣದಲ್ಲಿಯೇ ಆದರೂ ನಿಯಮಿತವಾಗಿ ರೂಢಿಸಿಕೊಂಡು ಬಂದಿರುವ ಆಸನ–ಪ್ರಾಣಾಯಾಮಗಳು ತಪಸ್ಸಿನಂತೆಯೇ ಸರಿ. ಅವಕ್ಕೆ ಬದುಕಿಗೊಂದು ಶ್ರುತಿಹಿಡಿದು ಲಯ ತಪ್ಪದಂತೆ ಮುನ್ನಡೆಸುವ ಶಕ್ತಿ ಇದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ನಿಯಮಿತತೆ ಮತ್ತು ಸಂಯಮ ಇವೆರಡು ಯೋಗಜೀವನದ ಆದ್ಯ ತತ್ತ್ವಗಳು.

ಯೋಗವೆಂದರೆ ಆಸನ–ಪ್ರಾಣಾಯಾಮಗಳಷ್ಟೇ ಅಲ್ಲದೆ, ಅಥವಾ ಎಂಟು ಅಂಗಗಳಿರುವ ಯೋಗಶಾಸ್ತ್ರವಷ್ಟೇ ಅಲ್ಲದೆ ಅದು ಭಾರತವು ಸಾಕ್ಷಾತ್ಕರಿಸಿಕೊಂಡಿರುವ ಒಂದು ಜೀವನದೃಷ್ಟಿಯಾಗಿದೆ. ಯೋಗವೆನ್ನುವ ಪದವನ್ನು ನಾನಾ ಶಾಸ್ತ್ರಗಳು ಬಳಸಿಕೊಂಡಿವೆ. ಹೆಚ್ಚೇಕೆ, ಭಗವಾನ್ ಶ್ರೀಕೃಷ್ಣನ ಗೀತೋಪದೇಶವೆಲ್ಲವೂ ಯೋಗಮಯವೇ. ಗೀತೆಯೇ ಹೇಳುವಂತೆ ನಾವು ಕೈಗೆತ್ತಿಕೊಂಡ ಕಾರ್ಯವನ್ನು ಅತ್ಯಂತ ಕುಶಲವಾಗಿ ನಿರ್ವಹಿಸುವುದು ಯೋಗದ ಒಂದು ನಿರ್ವಚನ. ಭಗವಾನ್ ಶ್ರೀಕೃಷ್ಣನು ಸ್ವಯಂ ಯೋಗೀಶ್ವರನೂ ಹೌದು.

ಜೂನ್ 21ರಂದು ಪ್ರತಿವರ್ಷ ಹಮ್ಮಿಕೊಳ್ಳಲಾಗುವ ಅಂತಾರಾಷ್ಟ್ರೀಯ ಯೋಗದಿನದಂದು ಯೋಗದ ಕುರಿತು ಆಸನಕ್ಕಿಂತ ಹೊರತಾದ ಅನುಸಂಧಾನ ನಮಗೆಲ್ಲ ಸಾಧ್ಯವಾದರೆ ಅದು ಯೋಗದಿನಾಚರಣೆಯ ಸಾರ್ಥಕತೆಯೇ ಹೌದು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ