ಮುಂಬೈ: ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧೆಡೆ ಭಾರಿ ಮಳೆ ಮುಂದುವರಿದಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿದೆ.
ಪುಣೆ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿ ಒಂದೇ ಕುಟುಂಬದ ಇಬ್ಬರು ಮೃತಪಟ್ಟಿದ್ದಾರೆ. ಅದೇ ಜಿಲ್ಲೆಯಲ್ಲಿ ಪ್ರವಾಹದಲ್ಲಿ ಕೊಚ್ಚಿ ಹೋಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿರುಗಾಳಿ ಜೊತೆಗೆ ಸುರಿದ ನಿರಂತರ ಮಳೆಯು ಮುಂಬೈ ಮತ್ತು ಪುಣೆಯಲ್ಲಿ ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ; ಈ ಎರಡೂ ಮಹಾನಗರಗಳಲ್ಲಿ 24 ಗಂಟೆಗಳ ಅವಧಿಯಲ್ಲಿ 200-250 ಮಿ.ಮೀ ಮಳೆ ಸುರಿದಿದೆ. ಮುಂಬೈನಲ್ಲಿ ಜುಲೈ ತಿಂಗಳ ಸರಾಸರಿ ಮಳೆಯು ಕೇವಲ ನಾಲ್ಕು ದಿನಗಳಲ್ಲಿಯೇ ಸುರಿದಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನಣವೀಸ್ ತಿಳಿಸಿದ್ದಾರೆ.
ಈ ಅವಧಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಮುಂಬೈ ಸಮೀಪದ ಗಿರಿಧಾಮವಾದ ಲೋನಾವಾಲಾದಲ್ಲಿ ದಾಖಲಾಗಿದ್ದು, ಇಲ್ಲಿ 600 ಮಿ.ಮೀಗಿಂತಲೂ ಹೆಚ್ಚು ಮಳೆ ಬಿದ್ದಿದೆ.
ಭಾರತೀಯ ಹವಾಮಾನ ಇಲಾಖೆಯ ಕೇಂದ್ರಗಳಿಂದ ಸಂಗ್ರಹಿಸಲಾದ ಮಾಹಿತಿಯ ಪ್ರಕಾರ, ಪುಣೆ ಮತ್ತು ಮುಂಬೈ ಮಹಾನಗರಗಳ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಲ್ಲಿ 800 ರಿಂದ 1,000 ಮಿ.ಮೀಗೂ ಹೆಚ್ಚು ಮಳೆಯಾಗಿದೆ. ಪುಣೆ ಜಿಲ್ಲೆಯ ಲೋನಾವಾಲಾ (625 ಮಿ.ಮೀ) ಮತ್ತು ತಮ್ಮಿನಿ ಘಾಟ್ (589 ಮಿ.ಮೀ) ಹಾಗೂ ಸತಾರಾ ಜಿಲ್ಲೆಯ ಮಹಾಬಲೇಶ್ವರ (513 ಮಿ.ಮೀ) ಪ್ರದೇಶಗಳು 24 ಗಂಟೆಗಳ ಅವಧಿಯಲ್ಲಿ ದಾಖಲೆ ಮಟ್ಟದ ಮಳೆಯನ್ನು ಕಂಡಿವೆ.
ಬಿರುಗಾಳಿ ಸಹಿತ ಭಾರಿ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಬೈ, ಠಾಣೆ ಮತ್ತು ರಾಯಗಢ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಭೂಕುಸಿತದ ಹಿನ್ನೆಲೆಯಲ್ಲಿ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಮುಂಬೈ ಮತ್ತು ನೆರೆಯ ಪಾಲ್ವರ್, ಠಾಣೆ, ರಾಯಗಡ ಮತ್ತು ಪುಣೆ ಜಿಲ್ಲೆಗಳಲಿ 1,000ಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಭೋರ್ ಘಾಟ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಮುಂಬೈ-ಪುಣೆ ಕಾರಿಡಾರ್‌ನ ರೈಲ್ವೆ ಸೇವೆ ಸ್ಥಗಿತಗೊಂಡಿದೆ.