ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಹಾಗೂ ನಿವೃತ್ತ ವೇತನದಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ತುಟ್ಟಿಭತ್ಯೆ ದರಗಳನ್ನು ಪ್ರಸ್ತುತಪಡಿಸಲಾಗಿದೆ ಮೂಲ ವೇತನದ ಶೇ 14.25ರಿಂದ ಶೇ 15.75ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.
2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ 1ನೇ ಜನವರಿ 2026 ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆ ದರಗಳನ್ನು ಪರಿಷ್ಕರಿಸಿದೆ.
ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೆ ಮತ್ತು ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವಂತಹ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೂ ಸಹ ದಿನಾಂಕ 1ನೇ ಜನವರಿ 2026 ರಿಂದ ಜಾರಿಗೆ ಬರುವಂತೆ ಹಾಲಿ ಇರುವ ತುಟ್ಟಿಭತ್ಯೆಯ ದರಗಳನ್ನು ಮೂಲ ನಿವೃತ್ತಿ ವೇತನ, ಕುಟುಂಬ ನಿವೃತ್ತಿ ವೇತನದ ಪ್ರಸಕ್ತ ಶೇಕಡ 14.25 ರಿಂದ ಶೇಕಡ 15.75ಕ್ಕೆ ಹೆಚ್ಚಿಸಲಾಗಿದೆ.
ಒಟ್ಟಾರೆಯಾಗಿ ರಾಜ್ಯ ಸರ್ಕಾರಿ ನೌಕರರು ಹಾಗೂ ನಿವೃತ್ತರ ತುಟ್ಟಿಭತ್ಯೆಯನ್ನು ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಶೇ 1.50ರಷ್ಟು ಹೆಚ್ಚಿಸಲಾಗಿದೆ.
