ಬೆಳಗಾವಿಯಲ್ಲಿ ಕಿತ್ತೂರು ಉತ್ಸವದ ಝಲಕ್..
ಬೆಳಗಾವಿ: ಬೆಳಗಾವಿಯಲ್ಲಿ ಮಂಗಳವಾರ ರಾತ್ರಿ ನಡೆದ ಕಿತ್ತೂರು ಉತ್ಸವದ ಪ್ರಯುಕ್ತ ನಡೆದ ಚೊಚ್ಚಲ ಕಾರ್ಯಕ್ರಮ ಜನಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಸಮಂಜರಿಯಲ್ಲಿ ಖ್ಯಾತನಾಮರು ಭಾಗವಹಿಸಿ ಪ್ರೇಕ್ಷಕರ ಮನ ಗೆದ್ದರು. ಖ್ಯಾತ ಗಾಯಕ ಕುನಾಲ್ ಗಾಂಜಾವಾಲಾ ನಡೆಸಿಕೊಟ್ಟ ಕಾರ್ಯಕ್ರಮಕ್ಕೆ ಪ್ರೇಕ್ಷಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ನೀನೇ ನೀನೇ ಮನಸೆಲ್ಲ ನೀನೆ ಎಂದು ಕನ್ನಡದಲ್ಲಿ ಹಾಡಿ ರಂಜಿಸಿದರು. ಇದಕ್ಕೆ ನೆರೆದಿದ್ದ ಯುವ ಸಮೂಹ ಭರ್ಜರಿ ಬೆಂಬಲ ಸೂಚಿಸಿತು. ಸಿಹಿ ಮಾತೊಂದು ಹೇಳಲೇ ನಾನಿಂದು ಎಂದು ಮತ್ತಷ್ಟು ಪ್ರೇಕ್ಷಕರನ್ನು ರಂಜಿಸಿದರು. ಕನ್ನಡ ಚಲನಚಿತ್ರ ರಂಗದಲ್ಲಿ ದಶಕಗಳು ಕಳೆದರೂ ಮುಂಗಾರು ಮಳೆ ಚಿತ್ರದ ಒಂದೇ ಒಂದು ಸಾರಿ ಕಣ್ಮುಂದೆ ಬಾರೆ ಚಿತ್ರಗೀತೆ ಇಡೀ ಕ್ರೀಡಾಂಗಣ ಹುಚ್ಚೆದ್ದು ಮೈಮರೆಯುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಜೊತೆಗೆ ಕನ್ನಡದ ಖ್ಯಾತ ಹಾಸ್ಯ ನಟ ಸಾಧುಕೋಕಿಲ ಅವರ ತಂಡ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದು ಕೊಟ್ಟಿತು. ಒಟ್ಟಾರೆ ಬೆಳಗಾವಿಯಲ್ಲಿ ಇದೇ ಮೊದಲ ಬಾರಿಗೆ ನಡೆದ ಕಿತ್ತೂರು ಉತ್ಸವದ ಸವಿ ನೆನಪಿನ ಈ ಕಾರ್ಯಕ್ರಮ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.