ಢಾಕಾ : ಬಾಂಗ್ಲಾದೇಶದಲ್ಲಿ ಎರಡು ಅಪರೂಪದ ಅಲ್ಬಿನೋ (ಬಿಳಿ/ಗುಲಾಬಿ ಚರ್ಮದ) ಕೋಣಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. ಈ ಎಮ್ಮೆಗಳು ವಿಶ್ವದ ಇಬ್ಬರು ಪ್ರಮುಖ ರಾಜಕೀಯ ನಾಯಕರನ್ನು ಹೋಲುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.
‘ದಿ ಇಂಡಿಪೆಂಡೆಂಟ್’ ವರದಿ ಪ್ರಕಾರ, ಬಾಂಗ್ಲಾದೇಶದ ರಾಜಧಾನಿ ಢಾಕಾ ಸಮೀಪದ ನಾರಾಯಣಗಂಜ್‌ನ ಫಾರ್ಮ್‌ವೊಂದರಲ್ಲಿರುವ 700 ಕೆಜಿ ತೂಕದ ಗುಲಾಬಿ ಚರ್ಮದ ಕೋಣ ಈಗ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹೋಲುವ ಕಾರಣಕ್ಕಾಗಿ ಈ ಕೋಣಕ್ಕೆ ‘ಡೊನಾಲ್ಡ್ ಟ್ರಂಪ್’ ಎಂದೇ ಹೆಸರಿಡಲಾಗಿದ್ದು, ಇದನ್ನು ನೋಡಲು ಜನ ಮುಗಿಬೀಳುತ್ತಿದ್ದಾರೆ. “ನಾನು ಫೇಸ್‌ಬುಕ್‌ನಲ್ಲಿ ಇದರ ಚಿತ್ರಗಳನ್ನು ನೋಡಿದಾಗ, ಇದು ಹೂಬಹೂ ಡೊನಾಲ್ಡ್ ಟ್ರಂಪ್ ಅವರಂತೆಯೇ ಕಾಣಿಸುತ್ತಿತ್ತು. ಇದರ ಮುಖದ ರಚನೆ ಮತ್ತು ತಲೆಯ ಮೇಲಿರುವ ಕೂದಲಿನ ಶೈಲಿ (ಹೇರ್‌ಸ್ಟೈಲ್) ಕೂಡ ಟ್ರಂಪ್ ಅವರಿಗೆ ಹೋಲುತ್ತದೆ,” ಎಂದು ಫಾರ್ಮ್‌ಗೆ ಭೇಟಿ ನೀಡಿದ ಪ್ರವಾಸಿಗರೊಬ್ಬರು ‘ಪ್ರಥಮ್ ಅಲೋ’ ಪತ್ರಿಕೆಗೆ ತಿಳಿಸಿದ್ದಾರೆ. “ಆದರೆ ಇದು ಸ್ವಭಾವದಲ್ಲಿ ತುಂಬಾ ಶಾಂತ ಮತ್ತು ವಿನಮ್ರವಾಗಿದೆ. ಈ ಒಂದು ಗುಣ ಮಾತ್ರ ಡೊನಾಲ್ಡ್ ಟ್ರಂಪ್ ಅವರಿಗೆ ಖಂಡಿತಾ ಮ್ಯಾಚ್ ಆಗುವುದಿಲ್ಲ!” ಎಂದು ಅವರು ತಮಾಷೆ ಮಾಡಿದ್ದಾರೆ.
ಇದರ ಮಾಲೀಕ ಜಿಯಾವುದ್ದೀನ್ ಮೃಧಾ ಮಾತನಾಡಿ, ಸುಮಾರು 10 ತಿಂಗಳ ಹಿಂದೆ ದನದ ಮಾರುಕಟ್ಟೆಯಿಂದ ಇದನ್ನು ಖರೀದಿಸಲಾಗಿತ್ತು. ಈಗ ದಿನಾಲೂ ಡಜನ್‌ಗಟ್ಟಲೆ ಜನರು ಫಾರ್ಮ್‌ಗೆ ಬಂದು ಇದರೊಂದಿಗೆ ಫೋಟೋ ತೆಗೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ. “ಇದರ ತಲೆಯ ಮೇಲಿರುವ ವಿಶಿಷ್ಟ ಕೂದಲನ್ನು ನೋಡಿ ನನ್ನ ಕಿರಿಯ ಸಹೋದರ ತಮಾಷೆಯಾಗಿ ಇದಕ್ಕೆ ‘ಡೊನಾಲ್ಡ್ ಟ್ರಂಪ್’ ಎಂದು ಹೆಸರಿಟ್ಟನು. ಅಲ್ಬಿನೋ ತಳಿಯ ಎಮ್ಮೆ-ಕೋಣಗಳು ಸಾಮಾನ್ಯವಾಗಿ ತುಂಬಾ ಶಾಂತ ಸ್ವಭಾವದವಾಗಿದ್ದು, ಯಾರಾದರೂ ಕೆಣಕುವವರೆಗೂ ಆಕ್ರಮಣಕಾರಿಯಾಗುವುದಿಲ್ಲ,” ಎಂದು ಅವರು ‘ಬಿಸಿನೆಸ್ ಸ್ಟ್ಯಾಂಡರ್ಡ್’ಗೆ ತಿಳಿಸಿದ್ದಾರೆ.
ಸದ್ಯ ಈ ‘ಟ್ರಂಪ್’ ಕೋಣವು ಕೆಜಿಗೆ 550 ಟಾಕಾ (ಬಾಂಗ್ಲಾದೇಶಿ ಕರೆನ್ಸಿ) ದರದಂತೆ ಈಗಾಗಲೇ ಮಾರಾಟವಾಗಿದ್ದು, ಈದ್ ಅಲ್-ಅಧಾ (ಬಕ್ರೀದ್) ಹಬ್ಬದ ಮುನ್ನವೇ ಹೊಸ ಮಾಲೀಕರಿಗೆ ಹಸ್ತಾಂತರವಾಗಲಿದೆ.
ಮತ್ತೊಂದಕ್ಕೆ ‘ನೆತನ್ಯಾಹು’ ಹೆಸರು!
ಇದೇ ನಾರಾಯಣಗಂಜ್‌ನಲ್ಲಿ ಮತ್ತೊಂದು ಅಲ್ಬಿನೋ ಕೋಣ ಪ್ರಸಿದ್ಧಿ ಪಡೆದಿದ್ದು, ಅದಕ್ಕೆ ಇಸ್ರೇಲ್ ಪ್ರಧಾನಿ ‘ಬೆಂಜಮಿನ್ ನೆತನ್ಯಾಹು’ ಎಂದು ಹೆಸರಿಡಲಾಗಿದೆ. 750 ಕೆಜಿಗೂ ಹೆಚ್ಚು ತೂಕವಿರುವ ಇದರ ಕಣ್ಣುಗಳು ಮತ್ತು ಕೂದಲು ಇಸ್ರೇಲ್ ಪ್ರಧಾನಿಯನ್ನು ಹೋಲುತ್ತವೆ ಎನ್ನಲಾಗಿದೆ. ಆದರೆ, ‘ಟ್ರಂಪ್’ ಕೋಣಕ್ಕೆ ಹೋಲಿಸಿದರೆ ಇದರ ಸ್ವಭಾವ ಸಂಪೂರ್ಣ ಉಲ್ಟಾ! ಇದು ಸದಾ ಜಗಳಗಂಟ ಹಾಗೂ ಆಕ್ರಮಣಕಾರಿ ಮನೋಭಾವವನ್ನು ಪ್ರದರ್ಶಿಸುತ್ತದೆ ಎಂದು ವರದಿಗಳು ಹೇಳಿವೆ.
ಈ ಬಗ್ಗೆ ಎಸ್‌ಎಸ್ ಕ್ಯಾಟಲ್ ಫಾರ್ಮ್‌ನ ಮ್ಯಾನೇಜರ್ ಒಬ್ಬರು ಮಾತನಾಡಿ, “ಈ ‘ನೆತನ್ಯಾಹು’ ತುಂಬಾ ತುಂಟ ಮತ್ತು ಕುತಂತ್ರ ಬುದ್ಧಿಯದ್ದಾಗಿದೆ. ನಾವು ಅದಕ್ಕೆ ಆಹಾರ ನೀಡಲು ಹೋದಾಗಲೂ ಅದು ಜೋರಾಗಿ ಉಸಿರು ಬಿಡುತ್ತಾ, ನಮ್ಮನ್ನು ಕೊಂಬಿನಿಂದ ತಿವಿಯಲು ಬರುತ್ತದೆ,” ಎಂದು ಅದರ ಉಗ್ರ ಸ್ವಭಾವವನ್ನು ವಿವರಿಸಿದ್ದಾರೆ.
ಒಟ್ಟಿನಲ್ಲಿ, ಈದ್ ಅಲ್-ಅಧಾ (ಬಕ್ರೀದ್) ಹಬ್ಬದ ಸಂಭ್ರಮದ ನಡುವೆ ರಾಜಕೀಯ ನಾಯಕರ ಹೆಸರಿನ ಈ ಎರಡು ಕೋಣಗಳು ಬಾಂಗ್ಲಾದೇಶದಲ್ಲಿ ಭಾರೀ ಕುತೂಹಲ ಮೂಡಿಸಿವೆ.
