ಬೆಳಗಾವಿ : ಬೆಳಗಾವಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಜೋರಾಗಿ ನಡೆದಿದೆ. ಆದರೆ ಇದೀಗ ಬಿಎಲ್ ಒ ಗಳು ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಅವರು ಬೆಳಗಾವಿ ಉತ್ತರ, ದಕ್ಷಿಣ ಮತ್ತು ಗ್ರಾಮೀಣ ಮತಕ್ಷೇತ್ರಗಳಲ್ಲಿ ಕೇವಲ ಶಾಸಕರ ಮನೆಗಳಲ್ಲಿ ಠಿಕಾಣಿ ಹೂಡಿರುವುದು ಗಮನ ಸೆಳೆದಿದೆ. ಜನಸಾಮಾನ್ಯರು ಕರೆ ಮಾಡಿ ಮತದಾರರ ಪಟ್ಟಿಯ ಫಾರ್ಮ್ ತುಂಬುವ ಬಗ್ಗೆ ಮಾಹಿತಿ ಕೇಳಿದರೂ ಸಮಂಜಸವಾದ ಉತ್ತರ ನೀಡುತ್ತಿಲ್ಲ.
ಬಿಎಲ್ ಒಗಳು ಸಾರ್ವಜನಿಕರ ಕರೆಗಳನ್ನು ಸಹ ಸ್ವೀಕರಿಸುವ ಸೌಜನ್ಯತೆ ತೋರುತ್ತಿಲ್ಲ. ಈ ಬಗ್ಗೆ ಮೇಲಧಿಕಾರಿಗಳು ಸಹ ಜಾಗೃತರಾಗದೇ ಇರುವುದು ಕಂಡುಬಂದಿದೆ. ಅದರಲ್ಲೂ ಬೆಳಗಾವಿಯ ವಿವಿಧ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರೆಸ್ ಕಾಲೋನಿ, ಸದಾಶಿನಗರ, ಹನುಮಾನ ನಗರ ಮುಂತಾದ ನಾಡಿನ ಗಣ್ಯರು ಎನಿಸಿಕೊಂಡವರ ಮನೆಗಳಿಗೂ ಇನ್ನೂ ಫಾರ್ಮ್ ಕೊಡುವಲ್ಲಿ ವಿಫಲರಾಗಿರುವುದು ಬೇಸರದ ಸಂಗತಿ.
ಸಂಬಂಧಿಸಿದ ನಾಗರಿಕರು ಖುದ್ದಾಗಿ ಹೋದರೂ ಫಾರ್ಮ್ ನೀಡದೆ ಸತಾಯಿಸುತ್ತಾರೆ. ಅವರು ತಮ್ಮ ಕಾರ್ಯ ಮರೆತಿದ್ದಾರೆ. ಕೇವಲ ಶಾಸಕರ ಮನೆಗಳಲ್ಲಿ ಮಾತ್ರ ಕಂಡುವ ನೋಟ ಸಾಮಾನ್ಯವಾಗಿದೆ. ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಂತೂ ಇದು ಹೆಚ್ಚಾಗಿ ಕಂಡು ಬಂದಿದೆ ಎನ್ನುವುದು ನಾಗರಿಕರ ಆರೋಪವಾಗಿದೆ.
ಶಾಸಕರ ಪಿಎ ಗಳಿಗೂ ಹೇಳಿದರು ಪ್ರಯೋಜನವಾಗಿಲ್ಲ. ಬಿಎಲ್ ಒ ಗಳು ಈಗ ಶಾಸಕರ ಹಿಂಬಾಲಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇವರು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಸಂಪೂರ್ಣವಾಗಿ ಎಡವಿದ್ದಾರೆ.
ಮನೆಯಲ್ಲಿರುವ ಒಬ್ಬರಿಗೆ ಕೊಟ್ಟು ಅದರಲ್ಲಿ ಮನೆಯ ಇತರ ಸದಸ್ಯರ ಹೆಸರು ಇರದೇ ಇರುವುದು ಸರ್ವೆ ಸಾಮಾನ್ಯ. ಮೇಲಧಿಕಾರಿಗಳು ಈ ಬಗ್ಗೆ ಇಂಥ ಬಿಎಲ್ ಒ ಗಳ ವಿರುದ್ದ ಇನ್ನಾದರೂ ಕ್ರಮ ಕೈಗೊಳ್ಳಬೇಕು. ಕನಿಷ್ಠ 20 ಸಲ ಕರೆ ಮಾಡಿದರೂ ಕಿಮ್ಮತ್ತು ತೋರುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರಾಗಿದೆ.