ದೆಹಲಿ :
ಲೋಕಸಭೆಗೆ ತಕ್ಷಣವೇ ಚುನಾವಣೆ ನಡೆದರೆ ಹೆಚ್ಚು ಸ್ಥಾನ ಯಾರಿಗೆ ಸಿಗುತ್ತದೆ ಗೊತ್ತೇ ? ಮತ್ತೊಮ್ಮೆ ದೇಶದ ಪ್ರಧಾನಿ ಹುದ್ದೆ ಯಾರಿಗೆ ಒಲಿಯುತ್ತದೆ ಗೊತ್ತೇ ? ಈ ಬಗ್ಗೆ ಮತ್ತೊಂದು ಚುನಾವಣಾ ಸಮೀಕ್ಷೆ ಹೊರಬಿದ್ದಿದೆ.
ಸದ್ಯ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್ ಡಿಎಗೆ ಮತ್ತೆ ಪೂರ್ಣ ಬಹುಮತ ಸಿಗಲಿದೆ. ನರೇಂದ್ರ ಮೋದಿ ಮತ್ತೆ ದೇಶದ ಪ್ರಧಾನಿಯಾಗಲು ದೇಶದ ಜನತೆ ಸಹಮತ ಸೂಚಿಸಿರುವುದು ಇಂಡಿಯಾ ಟಿವಿ-ಸಿ ಎನ್ ಎಕ್ಸ್ ಸಮೀಕ್ಷೆಯಿಂದ ಹೊರ ಬಿದ್ದಿದೆ.
ಲೋಕಸಭೆಗೆ ಸದ್ಯ ಸಾರ್ವತ್ರಿಕ ಚುನಾವಣೆ ನಡೆದರೆ ಎನ್ ಡಿಎ ಮೈತ್ರಿಕೂಟ 318 ಸ್ಥಾನ ಗೆದ್ದು ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಏರಲಿದೆ. ಇತ್ತೀಚಿಗೆ ಹೊಸದಾಗಿ ರಚನೆಯಾಗಿರುವ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ 175 ಸ್ಥಾನಗಳಷ್ಟೇ ಪಡೆಯಲಿದೆ.
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿತ್ತು. ಆದರೆ, ಲೋಕಸಭೆ ಚುನಾವಣೆಯಲ್ಲಿ ಮೋದಿಗೆ ಮತ ನೀಡುವ ಬಗ್ಗೆ ಒಲವು ತೋರಿದ್ದಾರೆ.
ಬಿಜೆಪಿ 20, ಕಾಂಗ್ರೆಸ್ 7, ಜೆಡಿಎಸ್ 1 ಸ್ಥಾನ ಗಳಿಸಲಿದೆ ಎಂದು ಸಮೀಕ್ಷೆ ನುಡಿದಿದೆ. 2019ರಲ್ಲಿ 303 ಸ್ಥಾನ ಗಳಿಸಿದ್ದ ಬಿಜೆಪಿ ಈಗ ಚುನಾವಣೆ ನಡೆದರೆ 290 ಸ್ಥಾನಕ್ಕೆ ಕುಸಿಯಲಿದೆ. ಆದರೆ, ಮತ್ತೆ ಅಧಿಕಾರಕ್ಕೆ ಬರುವಲ್ಲಿ ಯಾವುದೇ ತೊಂದರೆಯಾಗದು.
353 ಸ್ಥಾನ ಗಳಿಸಿದ್ದ ಎನ್ ಡಿ ಎ ಮೈತ್ರಿಕೂಟ 318 ಸ್ಥಾನ ಪಡೆಯಬಹುದು. ಲೋಕಸಭೆಯಲ್ಲಿ ಬಹುಮತಕ್ಕೆ 272 ಸ್ಥಾನ ಬೇಕಾಗಿದೆ. ಇಂಡಿಯಾ ಮೈತ್ರಿಕೂಟ 175 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆ ತಿಳಿಸಿದೆ. ರಾಜಸ್ಥಾನದಲ್ಲಿ ಎನ್ಡಿಎ 21, ಇಂಡಿಯಾ 4, ಮಧ್ಯಪ್ರದೇಶದಲ್ಲಿ ಎನ್ ಡಿಎ 24, ಇಂಡಿಯಾ 5, ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಇಂಡಿಯಾ 30, ಅಣ್ಣಾ ಡಿಎಂಕೆ ನೇತೃತ್ವದ ಎನ್ ಡಿಎ 9, ಬಿಹಾರ ಎನ್ ಡಿಎ 24, ಇಂಡಿಯಾ 16, ಆಂಧ್ರಪ್ರದೇಶ ವೈಎಸ್ಆರ್ ಕಾಂಗ್ರೆಸ್ 18, ಟಿ ಡಿ ಪಿ 7, ತೆಲಂಗಾಣ ಬಿ ಆರ್ ಎಸ್ 7, ಇಂಡಿಯಾ 5, ಪಂಜಾಬ್ ಇಂಡಿಯಾ 13, ಉತ್ತರಪ್ರದೇಶ ಎನ್ಡಿಎ 73, ಇಂಡಿಯಾ 7, ಗುಜರಾತ್ 26 ಬಿಜೆಪಿ, ಬಂಗಾಳ ಎನ್ ಡಿಎ 12, ಇಂಡಿಯಾ 4 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆ ತಿಳಿಸಿದೆ.