ಬೆಂಗಳೂರು: ಭಾರತವನ್ನು ಬ್ರಿಟೀಷರ ಆಳ್ವಿಕೆಯಿಂದ ಮುಕ್ತಗೊಳಿಸಿ, ಭಾರತೀಯರೆಲ್ಲರೂ ಬ್ರಿಟೀಷರ ಗುಲಾಮಗಿರಿಯಿಂದ ಸ್ವತಂತ್ರರಾಗಬೇಕೆನ್ನುವುದು ಎಂಬ ಹೆಗ್ಗುರಿಯಿಂದ ಹೋರಾಡಿದ ಸುಭಾಷ್ ಚಂದ್ರ ಬೋಸ್ ರವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಅಪ್ರತಿಮ ದೇಶಭಕ್ತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128 ನೇ ಜನ್ಮ ದಿನ. ದೇಶದ ಬಗ್ಗೆ ಅಪಾರ ಗೌರವಾಭಿಮಾನ ಹೊಂದಿದ್ದ ಮಹಾನ್ ದೇಶಭಕ್ತ. ಈಗಿನ ಐಎಎಸ್ ನಂತೆ ಬ್ರಿಟೀಷರ ಕಾಲದಲ್ಲಿದ್ದ ಐಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆದರೆ ತಮ್ಮ ಉಜ್ವಲ ಭವಿಷ್ಯವನ್ನು ತ್ಯಾಗ ಮಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನು ಮೀಸಲಾಗಿಟ್ಟರು. ಎರಡು ಬಾರಿ ಕಾಂಗ್ರೆಸ್ ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮಹಾತ್ಮಾ ಗಾಂಧಿಯವರು ಪ್ರತಿಪಾದಿಸುತ್ತಿದ್ದ ಸತ್ಯ ಹಾಗೂ ಅಹಿಂಸೆಯ ಮಾರ್ಗದಲ್ಲಿ ನಡೆದು ಭಾರತ ಸ್ವಾತಂತ್ರ್ಯ ಹೊಂದುವುದು ಕಷ್ಟಸಾಧ್ಯ ಎಂಬುದು ಸುಭಾಷರ ಅಭಿಪ್ರಾಯವಾಗಿತ್ತು. ಆದ್ದರಿಂದ ಶಸ್ತ್ರಾಸ್ತ್ರಗಳನ್ನು ಬಳಸಿಯೇ ಬ್ರಿಟೀಷರನ್ನು ಭಾರತದಿಂದ ಹೊರದೂಡುವ ಉದ್ದೇಶದಿಂದ ಐಎನ್ ಎ (ಇಂಡಿಯನ್ ನ್ಯಾಷನಲ್ ಆರ್ಮಿ)ಯನ್ನು ಸ್ಥಾಪಿಸಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ರ ಜನ್ಮದಿಂದು ಅವರ ಜೀವನ-ಸಾಧನೆಗಳನ್ನು ಸ್ಮರಿಸುವ ಜೊತೆಗೆ ಅವರ ಆದರ್ಶಗಳ ಹಾದಿಯಲ್ಲಿ ನಡೆಯುವ ಸಂಕಲ್ಪ ಮಾಡಬೇಕಿದೆ. ಈ ದಿಸೆಯಲ್ಲಿ ಸರ್ಕಾರ ಈ ಮಹಾನ್ ನಾಯಕನಿಗೆ ಗೌರವ ಸಲ್ಲಿಸಿದೆ ಎಂದರು.
*ದಾವೋಸ್ ಶೃಂಗಸಭೆ*
ದಾವೋಸ್ ಶೃಂಗಸಭೆಯಲ್ಲಿ ಭಾಗವಹಿಸುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಸಾಲಿನ ಆಯವ್ಯಯದ ಸಿದ್ಧತೆಯಲ್ಲಿ ತೊಡಗಿಕೊಳ್ಳ ಬೇಕಾಗಿರುವುದರಿಂದ 2025 ರ ದಾವೋಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
*ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ*
ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಅವರನ್ನು ಮುಖ್ಯಮಂತ್ರಿಗಳಾಗುವಂತೆ ಆಶಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮವಾಗಿದೆ ಎಂದರು.
*ಬಿಜೆಪಿಯ ಆರೋಪಗಳು ರಾಜಕೀಯ ಪ್ರೇರಿತ*
ಕಾರ್ಪೊರೇಶನ್ ಹಾಗೂ ಮಂಡಳಿಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲವೆಂಬ ಬಿಜೆಪಿಯರವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಅವರ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದರು.
ಲೋಕಾಯುಕ್ತದವರು ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಹಾಗೂ ಕುಟುಂಬದವರಿಗೆ ಕ್ಲೀನ್ ಚಿಟ್ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ತನಗೆ ಮಾಹಿತಿ ಇಲ್ಲವೆಂದು ತಿಳಿಸಿದರು.
ಸಿಎಂ ಜತೆ ಸ್ಯಾಫ್ರಾನ್ ಕಂಪನಿ ಅಧ್ಯಕ್ಷ ರಾಸ್ ಭೇಟಿ
ಬೆಂಗಳೂರು: ರಾಜ್ಯದಲ್ಲಿ ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಹೂಡಿಕೆ ಮಾಡಿರುವ ಜಾಗತಿಕ ಶ್ರೇಣಿಯ ಸ್ಯಾಫ್ರಾನ್ ಸಮೂಹದ ಅಧ್ಯಕ್ಷ ರಾಸ್ ಮ್ಯಾಕಲ್ನೆಸ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರುವಾರ ವಿಧಾನಸೌಧದ ಕಚೇರಿಯಲ್ಲಿ ಭೇಟಿಯಾದರು.
ಈ ಸೌಜನ್ಯದ ಭೇಟಿ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಕೂಡ ಉಪಸ್ಥಿತರಿದ್ದರು.
ಭೇಟಿಯ ವೇಳೆಯಲ್ಲಿ ರಾಜ್ಯದ ಕೈಗಾರಿಕಾಸ್ನೇಹಿ ನೀತಿ, ಹೂಡಿಕೆ ಕಾರ್ಯಪರಿಸರ, ವಿಷನ್ ಗ್ರೂಪ್ ಚಟುವಟಿಕೆಗಳು ಇತ್ಯಾದಿಗಳನ್ನು ಕುರಿತು ವಿಚಾರ ವಿನಿಮಯ ನಡೆಸಲಾಯಿತು.
ಕಂಪನಿಯು ಬೆಂಗಳೂರಿನಲ್ಲಿ ಹೊಂದಿರುವ ಸ್ಯಾಫ್ರಾನ್ ಡೇಟಾ ಸಿಸ್ಟಮ್ಸ್ ಮತ್ತು ಸ್ಯಾಫ್ರಾನ್ ಹೆಲಿಕಾಪ್ಟರ್ ಎಂಜಿನ್ಸ್ ಕಚೇರಿಗಳು ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ರಾಸ್ ಅವರು ಈ ಸಂದರ್ಭದಲ್ಲಿ ವಿಸ್ತೃತ ಮಾಹಿತಿ ನೀಡಿದರು.
ಕೃಷಿ ಸಚಿವ ಚೆಲುವರಾಯಸ್ವಾಮಿ, ಮುಖ್ಯಮಂತ್ರಿ ಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಸೇರಿದಂತೆ ಇತರರು ಇದ್ದರು.
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಎಪಿಎಂಸಿ ಗಳಲ್ಲಿ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ-ಎಂಎಸ್ ಪಿ ಯೋಜನೆಯನ್ನು ಜಾರಿಗೆ ತರಲು ಕೇಂದ್ರಕ್ಕೆ ಒತ್ತಾಯ-ಮಂಡ್ಯದಲ್ಲಿ ಸಂಯೋಜಿತ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ- ಸಿದ್ದರಾಮಯ್ಯ
ಬೆಂಗಳೂರು: ಕೃಷಿ ಪ್ರಧಾನವಾದ ಮಂಡ್ಯ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ ಒಂದು ಸಂಯೋಜಿತ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಲು ತೀರ್ಮಾನಿಸಲಾಗಿದ್ದು, ಇದರಿಂದ ಮಂಡ್ಯ, ಹಾಸನ,ಮೈಸೂರು ಚಾಮರಾಜನಗರ ಭಾಗದ ರೈತರಿಗೆ ಸಾವಯವ ಹಾಗೂ ಸಿರಿಧಾನ್ಯ ಕೃಷಿಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ದೊರೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಅಂತರರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ರೈತರ ಹಲವು ದಿನಗಳ ಬೇಡಿಕೆಯಾದ ಎಂಎಸ್ ಪಿ (ಕನಿಷ್ಟ ಬೆಂಬಲ ಬೆಲೆ) ಯೋಜನೆಯನ್ನು ಜಾರಿಗೆ ತರಬೇಕೆಂದು ಕೇಂದ್ರಸರ್ಕಾರವನ್ನು ಒತ್ತಾಯಿಸಿದರು.
*ರಾಗಿ ತಿಂದವನು ನಿರೋಗಿ* *ಸಿರಿಧಾನ್ಯಗಳ ಸೇವನೆ ಆರೋಗ್ಯಕ್ಕೆ ಉತ್ತಮ*
ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಆಹಾರದ ಕೊರತೆಯಿತ್ತು. ಆದರೆ ಈಗ ಹಲವಾರು ಆಹಾರಧಾನ್ಯಗಳನ್ನು ಭಾರತ ರಫ್ತು ಮಾಡುತ್ತಿರುವುದು ಹೆಮ್ಮೆಯ ವಿಷಯ. ವಿರಳ ಮಳೆಯಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ಸಾವಯವ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತದೆ. ಕೃಷಿ ಕುಟುಂಬಕ್ಕೆ ಸೇರಿದ ತಮ್ಮ ಕುಟುಂಬದವರೂ ಕೂಡ ಸಿರಿಧಾನ್ಯಗಳ ಕೃಷಿ ಮಾಡುತ್ತಿದ್ದುದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ರಾಗಿ ತಿಂದವನು ನಿರೋಗಿ ಎಂಬಂತೆ, ಸಿರಿಧಾನ್ಯಗಳ ಸೇವೆನೆ ಆರೋಗ್ಯಕ್ಕೆ ಉತ್ತಮವಾಗಿದೆ ಎಂದು ತಿಳಿಸಿದರು.
*ಸಿರಿಧಾನ್ಯ ಉತ್ಪಾದನ-ಕರ್ನಾಟಕ 3ನೇ ಸ್ಥಾನ*
ಭಾರತದಲ್ಲಿ ಸಿರಿಧಾನ್ಯಗಳ ಉತ್ಪಾದನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಒತ್ತು ನೀಡಿದೆ. ಸಾವಯವ ಕೃಷಿ ವಿಸ್ತೀರ್ಣದಲ್ಲಿ ಭಾರತವು ವಿಶ್ವದಲ್ಲಿ 2ನೇ ಸ್ಥಾನ ಹಾಗೂ ಒಟ್ಟು ಸಾವಯವ ಉತ್ಪಾದಕರಲ್ಲಿ ಮೊದಲನೇ ಸ್ಥಾನದಲ್ಲಿದೆ. ವಿಶ್ವದಲ್ಲಿ ಅಂದಾಜು 903.61 ಲಕ್ಷ ಟನ್ಗಳಷ್ಟು ಸಿರಿಧಾನ್ಯಗಳ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ ಶೇ.38.50 ರಷ್ಟು ಪಾಲು ನಮ್ಮ ಭಾರತ ದೇಶದ್ದಾಗಿದ್ದು, ವಿಶ್ವದ ಅತಿದೊಡ್ಡ ಸಿರಿಧಾನ್ಯ ಉತ್ಪಾದನೆಯಲ್ಲಿ ಮುಂಚೂಣಿ ರಾಷ್ಟ್ರವಾಗಿದೆ. ನಮ್ಮ ರಾಜ್ಯವು ಸಿರಿಧಾನ್ಯಗಳ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ದೇಶದಲ್ಲಿಯೇ 3ನೇ ಸ್ಥಾನದಲ್ಲಿರುತ್ತದೆ ಎಂದರು.
*“ಸಾವಯವ ಕೃಷಿ ನೀತಿ”*
ಭಾರತದ ಒಟ್ಟು ಸಾವಯವ ರಫ್ತು ಪ್ರಮಾಣವು 2.61 ಲಕ್ಷ ಟನ್ ಆಗಿದ್ದು, ಈ ಪೈಕಿ ಸಾವಯವದ ಆಹಾರ ರಫ್ತಿನಿಂದ ಸುಮಾರು 4008 ಕೋಟಿ ರೂ.ಗಳಷ್ಟು ಆದಾಯವಾಗಿರುತ್ತದೆ. ಸಾವಯವ ಮತ್ತು ಸಿರಿಧಾನ್ಯಗಳಿಗೆ ವ್ಯವಸ್ಥಿತ ಮಾರುಕಟ್ಟೆ ಮತ್ತು ಸರಬರಾಜು ಸರಪಳಿಯನ್ನು ಕಲ್ಪಿಸುವ ಉದ್ದೇಶದೊಂದಿಗೆ ಪರಿಷ್ಕೃತ “ಸಾವಯವ ಕೃಷಿ ನೀತಿ” ಯನ್ನು ನಮ್ಮ ಸರ್ಕಾರವು 2017ರಲ್ಲಿ ಹೊರತಂದಿದೆ. ರಾಜ್ಯದ ರೈತರಲ್ಲಿ ಸಾವಯವ ಕೃಷಿ ಪದ್ಧತಿಯ ಬಗ್ಗೆ ಅರಿವು ಮೂಡಿಸಲು”ಸಾವಯವ ಭಾಗ್ಯ ಯೋಜನೆಯನ್ನು” 2013 ನೇ ಸಾಲಿನಲ್ಲಿ ಹೊರತಂದು ಹೋಬಳಿಮಟ್ಟದಲ್ಲಿ ಮಾದರಿ ಸಾವಯವ ಗ್ರಾಮಗಳನ್ನು ಸ್ಥಾಪಿಸಿ ರೈತರನ್ನು ಒಗ್ಗೂಡಿಸಿ ಉತ್ತೇಜಿಸಲಾಗಿದೆ ಎಂದರು.
*ಸಂಶೋಧನಾ ಕೇಂದ್ರ*
ರಾಜ್ಯದ ಸಿರಿಧಾನ್ಯ ಕ್ಷೇತ್ರವನ್ನು ವಿಸ್ತರಿಸುವ ನಿಟ್ಟಿನಲ್ಲಿ “ರೈತ ಸಿರಿ” ಯೋಜನೆಯಡಿ ಪ್ರಮುಖ ಸಿರಿಧಾನ್ಯಗಳಾದ ಊದಲು, ನವಣೆ, ಹಾರಕ, ಕೊರಲೆ, ಸಾಮೆ ಮತ್ತು ಬರಗು ಬೆಳೆಗಳನ್ನು ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ ಗೆ ರೂ. 10,000/- ಗಳಂತೆ ಗರಿಷ್ಠ 2 ಹೆಕ್ಟೇರ್ ಗಳಿಗೆ ಪ್ರೋತ್ಸಾಹಧನವನ್ನು ಪಾವತಿಸಲಾಗುತ್ತಿದೆ. ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಹಾಗೂ ಉತ್ತಮ ಧಾರಣೆ ದೊರಕಿಸಿಕೊಡಲು ರಾಜ್ಯದ ಸಾವಯವ ಕೃಷಿಕರ ಸಂಘಗಳನ್ನು ಒಗ್ಗೂಡಿಸಿ 15 ಪ್ರಾಂತೀಯ ಸಾವಯವ ಒಕ್ಕೂಟಗಳನ್ನು ರಚಿಸಲಾಗಿದೆ. ಸಾವಯವ ಹಾಗೂ ಸಿರಿಧಾನ್ಯಗಳ ಕೃಷಿಗೆ ಸಂಬಂಧಿಸಿದ ಸಂಶೋಧನಾ ಕೇಂದ್ರಗಳನ್ನು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಲಾಗಿದೆ. ಸಿರಿಧಾನ್ಯಗಳ ಉತ್ತೇಜನದಲ್ಲಿ ಕರ್ನಾಟಕ ಸರ್ಕಾರವು ಕೈಗೊಂಡಿರುವ ವಿಶೇಷ ಪ್ರಯತ್ನಗಳನ್ನು ಗುರುತಿಸಿ ಕೇಂದ್ರ ಸರ್ಕಾರವು ಪ್ರಶಂಸನಾ ಪತ್ರ ವನ್ನು ಕರ್ನಾಟಕ ಸರ್ಕಾರದ ಕೃಷಿ ಇಲಾಖೆಗೆ ನೀಡಿರುತ್ತದೆ ಎಂದರು.
*ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ*
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು. ಕರ್ನಾಟಕ ಸರ್ಕಾರ ಸಿರಿಧಾನ್ಯಗಳ ಕೃಷಿ, ಮಾರುಕಟ್ಟೆ ಹಾಗೂ ಇತರೆ ಸೌಲಭ್ಯಗಳನ್ನು ನೀಡುವ ಮೂಲಕ ಸಿರಿಧಾನ್ಯ ಕೃಷಿಯ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲು ಬದ್ಧವಾಗಿದೆ ಎಂದರು.