ಬೆಳಗಾವಿ :
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಹಾಗೂ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸವದತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ರಾಮದೇವ ಹೋಟೆಲ್ ಹತ್ತಿರದ ಕನ್ನಡ ಭವನ ರಂಗ ಮಂದಿರದಲ್ಲಿ ಶುಕ್ರವಾರ (ಅ.6), ಶನಿವಾರ (ಅ.7) ಮತ್ತು ರವಿವಾರ (ಅ.8) ರಂದು ಸಂಜೆ 6.30 ಗಂಟೆಗೆ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಆರಾಧನಾ ಸಾಂಸ್ಕೃತಿಕ ಸಂಸ್ಥೆಯ ಗೌರವಾಧ್ಯಕ್ಷ ಝಕೀರ್ ನದಾಫ್ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ (ಅ.03) ನಡೆದ ನಾಟ್ಯ ಭೂಷಣ ಏಣಗಿ ಬಾಳಪ್ಪ ಸ್ಮರಣೋತ್ಸವ ನಿಮಿತ್ಯ ನಾಟಕ ಪ್ರದರ್ಶನ ಏರ್ಪಡಿಸುವ ಕುರಿತು ಅವರು ಮಾಹಿತಿ ನೀಡಿದರು.
ಏಣಗಿಯಲ್ಲಿ ನಾಟ್ಯ ಭೂಷಣ ಬಾಳಪ್ಪನವರ ಹೆಸರಿನಲ್ಲಿ ಸ್ಮಾರಕ ನಿರ್ಮಾಣಗೊಳ್ಳಬೇಕೆಂದು ಸರ್ಕಾರದ ಗಮನ ಸೆಳೆಯುವ ಕಾರಣಕ್ಕಾಗಿ ಅವರ ಹೆಸರಿನಲ್ಲಿ ನಾಟ್ಯ ಭೂಷಣ ಏಣಗಿ ಬಾಳಪ್ಪ ಸ್ಮರಣೋತ್ಸವದ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸವದತ್ತಿ,
ಸಂಘಟನೆ ಕಳೆದ 26 ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇಷ್ಟು ವರ್ಷಗಳ ಕಾಲ ಕೇವಲ ಸವದತ್ತಿಗೆ ಮಾತ್ರ ಮೀಸಲಾಗಿದ್ದ ಸಂಘಟನೆಯು ರಂಗ ಚಟುವಟಿಕೆಯನ್ನು ಈ ವರ್ಷ ಬೆಳಗಾವಿಯವರೆಗೂ ವಿಸ್ತರಿಸಿದೆ ಎಂದರು.
ಶುಕ್ರವಾರ (ಅ.6) ರಂದು ಧಾತ್ರಿ ರಂಗಸಂಸ್ಥೆ ಸಿರಿಗೇರಿ ಇವರಿಂದ “ಸೋರುತಿಹುದು ಸಂಬಂಧ” ಎಂಬ ನಾಟಕ ಪ್ರದರ್ಶನಗೊಳ್ಳಲಿದೆ ಮಹಾಂತೇಶ ರಾಮದುರ್ಗ ಅವರು ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ.
ಶನಿವಾರ ಅ.7 ರಂದು ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯವರಿಂದ “ನಮ್ದು ಹಳೆ ಕಥಿ” ನಾಟಕ ಪ್ರದರ್ಶನಗೊಳ್ಳಲಿದ್ದು, ಝಕೀರ ನದಾಫ ಅವರು ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ.
ಅದೇ ರೀತಿಯಲ್ಲಿ ರವಿವಾರ (ಅ.8) ರಂದು ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸವದತ್ತಿ ಇವರಿಂದ ಶ್ರೀನಿವಾಸ ವೈದ್ಯರ ಕಥೆ ಆಧಾರಿತ ಝಕೀರ ನದಾಫ ರವರಿಂದ ರಚಿಸಿ ನಿರ್ದೇಶಿಸಲ್ಪಟ್ಟ “ಬಾಸಿಂಗಬಲ” ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ನಾಟಕದ ಮಧ್ಯಂತರ ವೇಳೆಯಲ್ಲಿ ನಾಟಕೋತ್ಸವದ ಉದ್ಘಾಟನೆ ಮತ್ತು ಸಮಾರೋಪ ನೆರವೇರಲಿದೆ.
ಅ. 6 ರಂದು ಜರಗುವ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ರಂಗ ಸಂಶೋಧಕ ಡಾ. ಬಸವರಾಜ್ ಜಗಜಂಪಿ, ಹಿರಿಯ ಪತ್ರಕರ್ತ ಡಾ. ಸರ್ಜೂ ಕಾಟ್ಕರ್, ಸಾಹಿತಿ ವೈ. ಆರ್. ಪಾಟೀಲ ರಂಗಕರ್ಮಿಗಳಾದ ವಿನೋದ ಅಂಬೇಕರ ಪಾಲ್ಗೊಳ್ಳಲಿದ್ದಾರೆ.
ಝಕೀರ ನದಾಫ ರಚನೆಯ 16 ನಾಟಕಗಳ 8 ಪುಸ್ತಕಗಳು ಲೋಕಾರ್ಪಣೆಗೊಳ್ಳುಲಿವೆ.
ಶನಿವಾರ (ಅ.07) ರಂದು ಜರಗುವ ವೇದಿಕೆ ಕಾರ್ಯಕ್ರಮದಲ್ಲಿ ಹಿರಿಯ ರಂಗ ಚಿಂತಕರಾದ ಬಿ. ಎಸ್. ಗವಿಮಠ, ರಂಗಕರ್ಮಿ ಡಾ. ಡಿ.ಎಸ್ ಚೌಗಲೆ, ರಂಗಕರ್ಮಿ ಡಾ. ಎ.ಎಲ್ ಕುಲಕರ್ಣಿ. ಸಾಹಿತಿಗಳಾದ ರವಿ ಕೋಠಾರಗಸ್ತಿ, ಹಾಸ್ಯ ಕಲಾವಿದ ರವಿ ಭಜಂತ್ರಿ, ಆನಂದ ಭಿಂಗೆ, ರಂಗಕರ್ಮಿ ಬಾಬಾ ಸಾಹೇಬ್ ಕಾಂಬಳೆ ಪಾಲ್ಗೊಳ್ಳಲಿದ್ದಾರೆ.
ಅದೇ ರೀತಿಯಲ್ಲಿ ರವಿವಾರ (ಅ.08) ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ರಂಗಕರ್ಮಿ ಶಿರೀಶ್ ಜೋಶಿ, ರಂಗ ಸಂಶೋಧಕ ಡಾ. ರಾಮಕೃಷ್ಣ ಮರಾಠೆ, ಎಚ್.ಎಸ್ ದೇಶಪಾಂಡೆ, ರಂಗಕರ್ಮಿ ಶರಣಗೌಡ ಪಾಟೀಲ, ಸಾಹಿತಿ ಬಸವರಾಜ ಗಾರ್ಗಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಉಪಸ್ಥಿತರಿರಲಿದ್ದಾರೆ.
ನಾಟಕೋತ್ಸವವು ಕನ್ನಡ ಭವನದ ಆಡಳಿತ ಮಂಡಳಿ ಹಾಗೂ ಬೆಳಗಾವಿಯ ರಂಗ ಸೃಷ್ಟಿ ಕಲಾತಂಡದ ಸಹಯೋಗದೊಂದಿಗೆ ನೆರವೇರಲಿದೆ ಎಂದು ಆರಾಧನಾ ಸಾಂಸ್ಕೃತಿಕ ಸಂಸ್ಥೆಯ ಗೌರವಾಧ್ಯಕ್ಷ ಝಕೀರ್ ನದಾಫ್ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಶ್ರೀನಿವಾಸ, ಸಾಹಿತಿಗಳಾದ ವೈ.ಆರ್. ಪಾಟೀಲ ಹಾಗೂ ಶಿರೀಷ ಜೋಶಿ, ಬಸವರಾಜ ಗಾರ್ಗಿ, ರಂಗಕರ್ಮಿಗಳಾದ ಶರಣಗೌಡ ಪಾಟೀಲ, ಅನಂತ ಪಪ್ಪು ಉಪಸ್ಥಿತರಿದ್ದರು.