ಬೆಳಗಾವಿ : ಯುವ ಜನಾಂಗ ದೇಶದ ಸಂಪತ್ತಾಗಿದ್ದು, ಸಂಸ್ಕೃತಿ-ಪರಂಪರೆ ಹಾಗೂ ಪರಿಸರ ಅರ್ಥೈಸಿಕೊಳ್ಳುವುದು ಅವಶ್ಯವಾಗಿದೆ. ಪರಿಸರ ಸಂರಕ್ಷಣೆ ಎನ್ಸಿಸಿಯ ಮೂಲ ಧೈಯವಾಗಿದೆ ಎಂದು ಕರ್ನಾಟಕ ಮತ್ತು ಗೋವಾ ಎನ್ಸಿಸಿ ನಿರ್ದೇಶನಾಲಯದ ಡೆಪ್ಯುಟಿ ಡೈರೆಕ್ಟರೇಟ್ ಆಫ್ ಜನರಲ್ ಬಿ.ಅರುಣಕುಮಾರ ಹೇಳಿದರು.
ಅವರು ಬೆಳಗಾವಿ ಜಾಧವ ನಗರದಲ್ಲಿ ಎನ್ಸಿಸಿ ಗ್ರೂಪ್ ಆಶ್ರಯದಲ್ಲಿ ನ. 22ರ ವರೆಗೆ ಹಮ್ಮಿಕೊಂಡಿರುವ ಅಖಿಲ ಭಾರತ ಟ್ರ್ಯಾಕಿಂಗ್ (ಚಾರಣ) ಶಿಬಿರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಯುವ ಸಮುದಾಯದಲ್ಲಿ ಸಾಹಸ ಪ್ರವೃತ್ತಿ, ರಾಷ್ಟ್ರೀಯ ಪ್ರಜ್ಞೆ ಹಾಗೂ ಪರಿಸರದ ಕಾಳಜಿ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಚಾರಣ ಶಿಬಿರ ಸಹಕಾರಿಯಾಗಿದೆ ಎಂದರು. ಪ್ರತಿಯೊಬ್ಬ ವಿದ್ಯಾರ್ಥಿಯು ದೇಶ ಪರಂಪರೆ ಹಾಗೂ ಪರಿಸರವನ್ನು ಅರಿಯುವುದು ಬಹುಮುಖ್ಯ. ಈ ಉದ್ದೇಶದಿಂದ ಬೆಳಗಾವಿ ಚಾರಣ ಶಿಬಿರವನ್ನು ಆಯೋಜಿಸಲಾಗಿದೆ. ದೇಶದ ವಿವಿಧ ಸ್ಥಳಗಳಿಂದ ಆಗಮಿಸಿರುವ ನೀವು ಬೆಳಗಾವಿ ಸುತ್ತಮುತ್ತಲಿನ ಸುಂದರವಾದ ಬೆಟ್ಟಗುಡ್ಡ ಪರಿಸರವನ್ನು ಅರಿಯುತ್ತಿರೀ ಮಾತ್ರವಲ್ಲದೆ ಬೆಳಗಾವಿ ಪಾರಂಪರಿಕ ಇತಿಹಾಸವನ್ನು ತಿಳಿಯಸಲಾಗುವುದು ಎಂದು ಕೆಡೆಟ್ಗಳಿಗೆ ಕಿವಿಮಾತು ಹೇಳಿದರು.
ಬೆಳಗಾವಿ ಗ್ರೂಪ್ ಎನ್ಸಿಸಿಯ ಕಮಾಂಡರ್ ಕರ್ನಲ್ ಮೋಹನ್ ನಾಯಕ, ಈ ಶಿಬಿರದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿರುವ ವಿದ್ಯಾರ್ಥಿಗಳು ಒಟ್ಟಾಗಿ ಬೆಳಗಾವಿಯ ಸುತ್ತಲಿನ ಪ್ರಾಕೃತಿಕ ಸೌಂದರ್ಯ ಸವಿಯಲಿದ್ದಾರೆ. ಶಿಬಿರದಲ್ಲಿ ಕರ್ನಾಟಕ, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ, ತಮಿಳುನಾಡು, ಪಾಂಡಿಚೇರಿ, ಕೇರಳ ಹಾಗೂ ಲಕ್ಷದೀಪ ದಿಂದ 510 ಎನ್ ಸಿಸಿ ಕೆಡೆಟ್ಗಳು, 15 ಅಧಿಕಾರಿಗಳು ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.
ಟ್ರೇನಿಂಗ್ ಆಫೀಸರ್ ಜಗದೀಶ ಎಸ್ಎನ್, 26 ಕರ್ನಾಟಕ ಎನ್ ಸಿಸಿ ಬಟಾಲಿಯನ್ ಅಧಿಕಾರಿ ಕರ್ನಲ್ ಸುನೀಲ ದಾಗರ, ಲೆಫ್ಟಿನೆಂಟ್ ಕರ್ನಲ್ ಸಿದ್ದಾರ್ಥ ರೇಡು, ಸುಬೇದಾರ ಮೇಜರ್ ಕಲ್ಲಪ್ಪ ಪಾಟೀಲ ಇತರರಿದ್ದರು ಉಪಸ್ಥಿತರಿದ್ದರು. ಕೆಡೆಟ್ಗಳು ಈ 8 ದಿನದ ಶಿಬಿರದಲ್ಲಿ ಬೆಳಗುಂದಿ ಹಾಗೂ ವೈಜನಾಥ ಬೆಟ್ಟಗಳಲ್ಲಿ ಚಾರಣವನ್ನು ನಡೆಸಲಿದ್ದಾರೆ. ಹಾಗೂ ರಾಜಹಂಸಗಡ, ಮರಾಠಾ ಲೈಟ್ ಎನ್ಫಂಟ್ರಿ, ಕಮಾಂಡೋವಿಂಗ್, ಬೆಳಗಾವಿ ಕೋಟೆ ಆವರಣ ಮೊದಲ್ಗೊಂಡು ಹಲವಾರು ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.


