ದೆಹಲಿ :
ರಾಜ್ಯದ ಇಬ್ಬರು ಕೇಂದ್ರ ಸರ್ಕಾರದ 2023 ನೇ ಸಾಲಿನ ಅತ್ಯುತ್ತಮ ಶಿಕ್ಷಕ, ಶಿಕ್ಷಕಿ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದೇಶಾದ್ಯಂತ 50 ಮಂದಿಗೆ ಪ್ರಶಸ್ತಿ ಪ್ರಕಟಿಸಲಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯ ಕನ್ನಡ ಶಿಕ್ಷಕ ನಾರಾಯಣ ಪರಮೇಶ್ವರ್ ಭಾಗವತ್ ಮತ್ತು ಬಾಗಲಕೋಟೆಯ ಕೆಎಲ್ ಇ ಸೊಸೈಟಿಯ ಎಸ್ ಸಿಪಿ ಜೂನಿಯರ್ ಕಾಲೇಜಿನ ಸಪ್ನಾ ಶ್ರೀಶೈಲ ಅನಿಗೋಳ ಅವರಿಗೆ ಪ್ರಶಸ್ತಿ ಲಭಿಸಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ಶಿಕ್ಷಕರ ದಿನಾಚರಣೆಯಂದು ರಾಷ್ಟ್ರಪತಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದು, ಪ್ರಶಸ್ತಿಯು ಪ್ರಮಾಣ ಪತ್ರ ಹಾಗೂ 50 ಸಾವಿರ ರೂ. ನಗದು ಹಾಗೂ ಬೆಳ್ಳಿ ಪದಕ ಒಳಗೊಂಡಿರಲಿದೆ.
ಪರಿಚಯ :
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಕೆಎಲ್ ಇ ಜ್ಯೂನಿಯರ್ ಕಾಲೇಜಿನ ಶಿಕ್ಷಕಿ ಸ್ವಪ್ನಾ ಅನಿಗೋಳ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಪಾತ್ರರಾದ ಕನ್ನಡಿಗರು. ಎಂಎಸ್ ಸಿ, ಬಿಎಡ್ ಪದವೀಧರೆಯಾಗಿರುವ ಸ್ವಪ್ನಾ ವಿಜ್ಞಾನ ವಿಷಯದ ಶಿಕ್ಷಕಿ. ವಿಭಿನ್ನವಾಗಿ ಬೋಧನಾ ಶೈಲಿಯ ಮೂಲಕ ಮಕ್ಕಳ ಮನ ಗೆದ್ದವರು ಅವರು.
ಪ್ರತಿ ದಿನ ಮಕ್ಕಳ ಹಾಜರಾತಿ ಪಡೆಯುವ ವೇಳೆ ಮಕ್ಕಳ ಹೆಸರಿನ ಬದಲು ರಸಾಯನಿಕಗಳ ಹೆಸರು ಕೂಗುತ್ತಾರೆ ಸ್ವಪ್ನಾ ಟೀಚರ್. ಸ್ಕೌಟ್ ಆ್ಯಂಡ್ ಗೈಡ್ಸ್, ಸಾಮಾಜಿಕ ಚಟುವಟಿಕೆಗಳಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ಮಹಾಲಿಂಗಪುರ ನಗರಸಭೆ ವ್ಯಾಪ್ತಿಯಲ್ಲಿ ಅವರನ್ನು ಸ್ವಚ್ಚತಾ ರಾಯಭಾರಿಯಾಗಿ ಅವರನ್ನು ನೇಮಿಸಲಾಗಿದೆ.
ನಾರಾಯಣ ಭಾಗವತ :
ಶಿರಸಿಯ ಮಾರಿಕಾಂಬಾ ಪ್ರೌಢ ಶಾಲೆಯ ಕನ್ನಡ ಶಿಕ್ಷಕ ನಾರಾಯಣ ಭಾಗವತ ಅವರಿಗೂ ಪ್ರಶಸ್ತಿ ಲಭಿಸಿದೆ. ಅವರು ರಂಗಕರ್ಮಿಯೂ ಹೌದು. ನಾರಾಯಣ ಭಾಗವತ ಅವರಿಗೆ ರಾಷ್ಟ್ರ ಮಟ್ಟದಲ್ಲಿ ನೀಡಲಾಗುವ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಒಲಿದು ಬಂದಿದೆ.
ನಾರಾಯಣ ಭಾಗವತ ಅವರು ಅನೇಕ ಶೈಕ್ಷಣಿಕ ಪ್ರಯೋಗಗಳ ಜೊತೆ ಕನ್ನಡ ಭಾಷಾ ಪ್ರಯೋಗದಲ್ಲೂ ಕೆಲಸ ಮಾಡಿದ್ದಾರೆ. ಕಳೆದ ವರ್ಷ ಇವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿತ್ತು. ರಾಷ್ಟ್ರ ಮಟ್ಟದಲ್ಲಿ ವಿಜ್ಞಾನ ನಾಟಕದಲ್ಲೂ ರಾಷ್ಟ್ರ ಮಟ್ಟದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿತ್ತು.