ಮುಂಬಯಿ/ಬೆಂಗಳೂರು :
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೀಡಿರುವ ಹೇಳಿಕೆ ಇದೀಗ ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲೋಕಲ್ಲೋಲ ಸೃಷ್ಟಿಸಿದೆ.
ಸತಾರದಲ್ಲಿ ಕೆಲ ದಿನಗಳ ಹಿಂದೆ ಮಾತನಾಡಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲೂ ಆಪರೇಷನ್ ನಡೆಯುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಪತನಕ್ಕೆ ತೆರೆಮರೆಯಲ್ಲಿ ಸರ್ಕಸ್ ನಡೆಯುತ್ತಿದೆ ಎಂದು ಹೇಳಿದ್ದಾರೆ.
ನಾನು ಇತ್ತೀಚೆಗೆ ಕರ್ನಾಟಕದ ಒಂದು ಸಭೆಗೆ ತೆರಳಿದ್ದೆ. ಕರ್ನಾಟಕದಲ್ಲಿಯೂ ನಾಥ್ ಆಪರೇಷನ್ ಮಾಡುವುದಿದೆ ಎಂದು ಅಲ್ಲಿಯ ನಾಯಕರು ಹೇಳಿದ್ದಾರೆ. ನಾಥ್ ಆಪರೇಷನ್ ಅಂದರೇನು? ಅಂತ ನಾನು ಅವರನ್ನು ಕೇಳಿದೆ. ಆಗ ಅವರು ನೀವು ಮಹಾರಾಷ್ಟ್ರದ ಮಹಾಘಟಬಂಧನ ಸರಕಾರವನ್ನು ಪತನ ಮಾಡಿದ್ದೀರಾ, ಹೀಗಾಗಿ ನಿಮ್ಮ ಅನುಭವ ನಮಗೆ ಬಹಳ ಅವಶ್ಯಕವಿದೆ ಎಂದು ಹೇಳಿದ್ದರು. ಅದಕ್ಕೆ ಚುನಾವಣೆ ಮುಗಿದ ಮೇಲೆ ನಾನು ಕರ್ನಾಟಕಕ್ಕೆ ಮತ್ತೆ ಬರುತ್ತೇನೆ ಎಂದು ಹೇಳಿದ್ದೆ ಎಂದು ತಿಳಿಸಿದ್ದಾರೆ.
ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆ ಕರ್ನಾಟಕದ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಾದ ಬಿಜೆಪಿ- ಜೆಡಿಎಸ್ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.