ಮುಂಬಯಿ : ‘ಕೇವಲ ಉಚಿತ ಕೊಡುಗೆಗಳನ್ನು ಕೊಡುವುದರಿಂದ ದೇಶದಲ್ಲಿನ ಬಡತನವು ನಿರ್ಮೂಲನೆ ಅಸಾಧ್ಯ. ಉದ್ಯೋಗ ಸೃಷ್ಟಿಯಿಂದ ಮಾತ್ರವೇ ಅಭಿವೃದ್ಧಿ ಹೊಂದಲು ಆಗುವುದು’ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಹೇಳಿದ್ದಾರೆ. ಈ ಮೂಲಕ ಉಚಿತ ಕೊಡುಗೆಗಳ ವಿರುದ್ಧ ದನಿ ಎತ್ತಿದ್ದಾರೆ. ಇಲ್ಲಿ ನಡೆದ ಟೈಕೂನ್ ಮುಂಬೈ 2025 ಸಮಾವೇಶದಲ್ಲಿ ಮಾತನಾಡಿದ ಮೂರ್ತಿ, ‘ಜೊತೆಗೆ ಕೇವಲ ಉಚಿತ ಕೊಡುಗೆಗಳನ್ನು ಕೊಟ್ಟರೆ ಬಡತನ ಮಾಯವಾಗುತ್ತದೆ ಎಂದು ಅಂದುಕೊಂಡಿದ್ದರೆ, ಅದು ಅಸಾಧ್ಯ. ಇಲ್ಲಿವರೆಗೆ ಈ ರೀತಿ ಉಚಿತ ಕೊಡುಗೆಗಳನ್ನು ಕೊಟ್ಟಿರುವ ಯಾವ ದೇಶವೂ ಬಡತನದಿಂದ ಹೊರಬಂದಿಲ್ಲ’ ಎಂದರು.
‘ಇದರ ಬದಲು, ನಾವು ಹೆಚ್ಚೆಚ್ಚು ಉದ್ಯಮಗಳನ್ನು ಶುರು ಮಾಡಬೇಕು. ಈ ಮೂಲಕ ಹೆಚ್ಚು ಉದ್ಯೋಗ ಸೃಷ್ಟಿಸಬೇಕು. ಹೀಗಾದಲ್ಲಿ ಬಡತನವು ಬೆಳಗಿನ ಇಬ್ಬನಿಯಂತೆ ಮಾಯವಾಗುತ್ತದೆ ಎಂದು ಅಭಿಪ್ರಾಯ ಹೊರಹಾಕಿದರು. ಇನ್ನು 200 ಯೂನಿಟ್ ಉಚಿತ ವಿದ್ಯುತ್ ಉದಾಹರಣೆ ನೀಡಿದ ಮೂರ್ತಿ, ಉಚಿತ ವಿದ್ಯುತ್ನಿಂದ ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಾಗಿದೆಯೇ ಅಥವಾ ಮಕ್ಕಳ ಮೇಲೆ ಪೋಷಕರ ಕಾಳಜಿ ಹೆಚ್ಚಿದೆಯೇ ಎಂಬುದನ್ನು ಅರಿಯಲು 6 ತಿಂಗಳಿಗೊಮ್ಮೆ ಸಮೀಕ್ಷೆ ನಡೆಸಬಹುದು ಎಂದು ಸಲಹೆ ನೀಡಿದರು.
ಪ್ರಸ್ತುತ, ಭಾರತವು ಮಾಸಿಕ ನಗದು ವರ್ಗಾವಣೆಯ ಮೂಲಕ 80 ಕೋಟಿ ಜನರಿಗೆ ಆಹಾರವನ್ನು ನೀಡುತ್ತಿದೆ. ಉಚಿತ ಕೊಡುಗೆಗಳು ಮತ್ತು ಅವುಗಳ ವೆಚ್ಚಗಳ ಕುರಿತು ಚರ್ಚೆ ನಡೆಯುತ್ತಿರುವಾಗ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಈ ಹೇಳಿಕೆ ಬಂದಿದೆ. ಆ ಬಳಿಕ ಅವರು ರಾಜಕೀಯ ಅಥವಾ ಆಡಳಿತದ ಬಗ್ಗೆ ಹೆಚ್ಚು ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದರು, ಆದರೆ ನೀತಿ ಚೌಕಟ್ಟಿನ ದೃಷ್ಟಿಕೋನದಿಂದ ಕೆಲವು ಶಿಫಾರಸುಗಳನ್ನು ನೀಡಿದರು.