ಹುಬ್ಬಳ್ಳಿ : ವಿಧಾನ ಪರಿಷತ್ ಬಿಜೆಪಿ ಸದಸ್ಯ ಕೆ.ಪಿ.ನಂಜುಂಡಿ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿನ ಸಭಾಪತಿಯವರ ಗೃಹ ಕಚೇರಿಗೆ ಆಗಮಿಸಿದ ಕೆ.ಪಿ.ನಂಜುಂಡಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆ ನೀಡಿದ್ದಾರೆ.
ಅವರು ಬುಧವಾರ (ಏಪ್ರಿಲ್ 24) ಬೆಳಿಗ್ಗೆ 10 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರಲಿದ್ದಾರೆ.
ರಾಜೀನಾಮೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬುಧವಾರ ಬೆಳಗ್ಗೆ 10 ಗಂಟೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದೇನೆ. ನಿರ್ಲಕ್ಷ್ಯಕ್ಕೊಳಗಾದ ಕಾಯಕ ಸಮಾಜದ ಏಳಿಗೆಗೆ ರಾಜಕೀಯಕ್ಕೆ ಬಂದೆ. ಆದರೆ, ಬಿಜೆಪಿ ಮುಖಂಡರು ಒಂದು ದಿನವೂ ಕಾಯಕ ಸಮಾಜದ ಬಗ್ಗೆ ಮಾತಾಡಿಲ್ಲ. ಬಿಜೆಪಿ ಸರ್ಕಾರವಿದ್ದಾಗ ನಮ್ಮ ಸಮುದಾಯಕ್ಕೆ ಯಾವುದೇ ರೀತಿ ಸ್ಪಂದಿಸಿಲ್ಲ. ನನ್ನನ್ನು ಎಂಎಲ್ಸಿ ಮಾಡಿ ಸುಮ್ಮನಾದರು, ಬಿಜೆಪಿಯಲ್ಲಿ ನನ್ನನ್ನು ನಿರ್ಲಕ್ಷ್ಯ ಮಾಡಿದರು, ನನ್ನನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಿಲ್ಲ ನನಗೆ ಸಚಿವನಾಗುವ ಅರ್ಹತೆ ಇದೆ. ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಇಂದೇ ರಾಜೀನಾಮೆ ನೀಡುವೆ ಎಂದು ತಿಳಿಸಿದರು.
ಸಚಿವನಾಗುವ ಅರ್ಹತೆ ಇದ್ದರೂ ಬಿಜೆಪಿಯಿಂದ ನಿರ್ಲಕ್ಷ್ಯ ಮಾಡಿದರು. ಇದರಿಂದ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ. ಡಿಸಿಎಂ ಡಿಕೆ ಶಿವಕುಮಾರ್ ನನ್ನ ಮನೆಗೆ ಬಂದು ಹೋದ ನಂತರ ಬಿಜೆಪಿಯವರು ಯಾರು ನನ್ನ ಮಾತನಾಡಿಸಿಲ್ಲ. ಯಾವ ನಿರೀಕ್ಷೆ ಇರಿಸಿಕೊಂಡು ಬಿಜೆಪಿಗೆ ಹೋಗಿದ್ದೇನೋ? ಸಮಾಜ ಮತ್ತು ಹಿಂದುಳಿದ ಸಮಾಜದ ಹಿತ ದೃಷ್ಟಿಯಿಂದ ಅದು ಈಡೇರಿಲ್ಲ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಜಕಣಾಚಾರಿ, ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮ ಮಾಡಿದ್ದು ಬಿಟ್ಟರೆ ಬೇರೇನು ಮಾಡಲಿಲ್ಲ. ನಾನು ಪಕ್ಷ ಸೇರುವಾಗ ಯಡಿಯೂರಪ್ಪ ಹಿಂದುಳಿದ ಸಮಾಜಗಳಿಗೆ ಸಾವಿರ ಕೋಟಿ ನೀಡುವುದಾಗಿ ಹೇಳಿದ್ದರು. ಆದರೆ, ನೀಡಲಿಲ್ಲ ಎಂದು ಅವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.