ನಗರದ ಸಪ್ನ ಬುಕ್ಹೌಸ್ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕವಿ ನದೀಮ್ ಸನದಿ ಅವರ ‘ಪ್ರತಿರೋಧ ಮತ್ತು ಪ್ರಿಯತಮೆ’ ಕವನ ಸಂಕಲನವನ್ನು ಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಇಂದು ಓದುಗರು ಪುಸ್ತಕ ಮುಚ್ಚಿಡುವುದಕ್ಕಿಂತ, ಖುಷಿಯಿಂದ ಬಿಚ್ಚಿಟ್ಟು ಓದಬಲ್ಲ ಸಾಹಿತ್ಯ ರಚಿಸೇಕು. ನಮಗೆ ಕೃತಿಗಳು ಮುಖ್ಯವಾಗಬೇಕೇ ಹೊರತು, ಕೃತಿಗಳ ಸಂಖ್ಯೆಯಲ್ಲ ಎಂದು ಪ್ರತಿಪಾದಿಸಿದ ಅವರು, ಸಾಹಿತಿಗಳು ನಿರಂತರವಾಗಿ ಅಧ್ಯಯನಶೀಲವಾಗಿರಬೇಕು. ಒಂದೇ ಪ್ರಕಾರಕ್ಕೆ ಸೀಮಿತವಾಗದೆ, ಬೇರೆ ಬೇರೆ ಪ್ರಕಾರಗಳ ಉತ್ತಮ ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು. ಆಗ ಉತ್ತಮ ಸಂಗತಿಯೊಂದಿಗೆ ಅನುಸಂಧಾನವಾಗುತ್ತದೆ ಎಂದರು.
ಎಲ್ಲ ಆಯಾಮಗಳಿಂದಲೂ ಈ ಕೃತಿ ಅತ್ಯುತ್ತಮವಾಗಿ ಹೊರಬಂದಿದೆ. ಪ್ರತಿ ಕವಿತೆಯೂ ವೈಶಿಷ್ಟ್ಯತೆಯಿಂದ ಕೂಡಿದೆ. ಮಾನವೀಯ ಪ್ರೀತಿ ಬಿತ್ತುವಲ್ಲಿ ಇದು ಯಶಕಂಡಿದೆ ಎಂದು ಹೇಳಿದರು.
ಇಂದು ಸಣ್ಣ–ಪುಟ್ಟ ಸಮಸ್ಯೆಗಳಿಗೆ ಯುವಜನರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅದು ಅವಮಾನವಲ್ಲ. ಆದರೆ, ಖಿನ್ನತೆಯಿಂದ ಪುಟಿದೆದ್ದು ಬಾರದಿರುವುದು ನಿಜವಾದ ಅವಮಾನ. ಎಂಥದ್ದೇ ಕಷ್ಟ ಬಂದರೂ ಎದುರಿಸುವ ಛಾತಿಯನ್ನು ಯುವಸಮೂಹ ಬೆಳೆಸಿಕೊಳ್ಳಬೇಕು ಎಂದು ಕರೆಕೊಟ್ಟರು.
ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ‘ಸಮಾಜದಲ್ಲಿ ಲೋಪದೋಷಗಳನ್ನು ಎತ್ತಿ ತೋರಿಸಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ಬರಹಗಾರರ ಕೆಲಸ. ಸಮಾಜ ತಿದ್ದಬಲ್ಲ ಶಕ್ತಿಯೂ ಕಾವ್ಯಕ್ಕಿದೆ. ನದೀಮ್ ಸನದಿ ಆ ಕಾರ್ಯದಲ್ಲಿ ಯಶಸ್ವಿ ಆಗಿದ್ದಾರೆ’ ಎಂದು ಶ್ಲಾಘಿಸಿದರು.
ಉರ್ದು ಕವಿ ಎಂ.ಎಂ.ಮಿರ್ಜಾ, ಇಂದಿನ ಪ್ರಸಾರ ಮಾಧ್ಯಮಗಳ ಹಾವಳಿಯಲ್ಲಿ ಕವಿತಗಳನ್ನು ಜೀವಂತವಾಗಿ ಇರಿಸುವುದು ಬಹುದೊಡ್ಡ ಸಾಧನೆ. ನದೀಮ್ ಸನದಿ ಅವರು ಕ್ರಿಯಾತ್ಮಕವಾಗಿ ಅದನ್ನು ಮುಂದುವರಿಸಿದ್ದಾರೆ ಎಂದರು.
ಕೃತಿ ಪರಿಚಯಿಸಿದ ಎಚ್.ಬಿ.ಕೋಲಕಾರ, ಮಾನವೀಯತೆ ಹಾಗೂ ಮಾನವ ಪ್ರೀತಿಯ ಬೀಜ ಬಿತ್ತುವ ಕಾರ್ಯದಲ್ಲಿ ನದೀಮ್ ಸನದಿ ಸಫವಾಗಿದ್ದಾರೆ. ಅವರ ಕವಿತೆಗಳಲ್ಲಿ ಸಾಮಾಜಿಕ ಸಂವೇದನೆ ಮತ್ತು ಪ್ರೇಮ ಸಂವೇದನೆಯು ಅರ್ಥಪೂರ್ಣವಾಗಿ ಚಿತ್ರಿತವಾಗಿದೆ. ಅರ್ಥವಿಸ್ತಾರದ ನೆಲೆಗಟ್ಟಿನಲ್ಲಿ ನದೀಮ್ ಅವರ ಕೃತಿ ಕಳೆಗಟ್ಟುತ್ತದೆ. ಅವಿಭಕ್ತ ಪ್ರಜ್ಞೆ, ಭಾವ ಪ್ರಾಧಾನ್ಯತೆ ಮತ್ತು ಅರ್ಥಪೂರ್ಣವಾಗಿ ಬಳಸಿದ ಹಿತ–ಮಿತವಾದ ಶಬ್ದಗಳೇ ಕವಿತೆಗಳ ಜೀವಾಳವಾಗಿವೆ ಎಂದು ತಿಳಿಸಿದರು.
ಲೇಖಕ ನದೀಮ್ ಸನದಿ ಮಾತನಾಡಿ, ಕ್ರೌರ್ಯ ತುಂಬಿದ ಇಂದಿನ ಜಗತ್ತಿನಲ್ಲಿ ಮಾನವೀಯ ಪ್ರೀತಿ ಹರಡುವ ತುರ್ತು ಅಗತ್ಯವಿದೆ. ಧ್ವನಿ ಇಲ್ಲದವರಿಗೆ ಧ್ವನಿ ನೀಡುವ ಕೆಲಸ ಸಾಹಿತಿಗಳು, ಲೇಖಕರು ಮತ್ತು ಕಲಾವಿದರಿಂದ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಡಾ.ಸರಜೂ ಕಾಟ್ಕರ್, ಡಿ.ಎಸ್.ಚೌಗಲೆ, ಪ್ರೊ.ಎಲ್.ವಿ.ಪಾಟೀಲ, ಶ್ರೀರಂಗ ಜೋಶಿ, ಬಿ.ಎಸ್.ಗವಿಮಠ, ಡಾ.ಗುರುಪಾದ ಮರಿಗುದ್ದಿ, ಹಮೀದಾ ಬೇಗಂ ದೇಸಾಯಿ, ವೈ.ಬಿ.ಹಿಮ್ಮಡಿ, ಬಸವರಾಜ ಗಾರ್ಗಿ, ಸುಮಾ ಕಿತ್ತೂರ, ಜ್ಯೋತಿ ಬದಾಮಿ, ಅಭಿಷೇಕ ಬೆಂಢಿಗೇರಿ, ಚೇತನ ಹರಗಬನ್ ಇತರರಿದ್ದರು. ಸಪ್ನ ಬುಕ್ಹೌಸ್ನ ಬೆಳಗಾವಿ ಶಾಖೆ ಮುಖ್ಯಸ್ಥ ಎಂ.ವಿ.ರಘು ಸ್ವಾಗತಿಸಿದರು.