ಬೆಳಗಾವಿ : ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಮಕ್ಕಳ ಶಿಕ್ಷಣದ ಮೇಲೆಯೇ ಅವಲಂಬಿಸಿದೆ. ನನ್ನ ಕ್ಷೇತ್ರದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರುವುದನ್ನು ನೋಡಬೇಕೆನ್ನುವುದೇ ನನ್ನ ದೊಡ್ಡ ಕನಸು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಕ್ಷೇತ್ರದ ಕುದ್ರೇಮನಿ ಮತ್ತು ಬೆಕ್ಕಿನಕೇರಿಯಲ್ಲಿ ಬುಧವಾರ ಶಾಲಾ ಕೊಠಡಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ನಮ್ಮ ಕ್ಷೇತ್ರದ ಭವಿಷ್ಯ ಶಿಕ್ಷಣದ ಮೇಲೆ ಅವಲಂಬಿಸಿದೆ. ಹಾಗಾಗಿ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನನ್ನ ಕ್ಷೇತ್ರದ ಮಕ್ಕಳು ಉತ್ತಮ ಶಿಕ್ಷಣ ಪಡೆದು ರಾಜ್ಯಕ್ಕೆ, ರಾಷ್ಟ್ರಕ್ಕೆ ಹೇಸರು ತರಬೇಕು ಎಂದು ಕರೆ ನೀಡಿದರು.
ದೇಶದ ಭವಿಷ್ಯ, ರಾಜ್ಯದ ಭವಿಷ್ಯ ಗ್ರಾಮದ ಭವಿಷ್ಯ ವಿದ್ಯಾರ್ಥಿಗಳ ಮೇಲಿದೆ. ನಮ್ಮ ಮಕ್ಕಳು ಬಹಳ ದೊಡ್ಡದಾಗಿ ಬೆಳೆಯಬೇಕು. ಡಾಕ್ಟರ್ ಆಗಬೇಕು, ಎಂಜಿನಿಯರ್ ಆಗಬೇಕು, ಐಎಎಸ್ ಅಧಿಕಾರಿಯಾಗಬೇಕು ಎಂದು ತಾಯಂದಿರು ಕನಸು ಕಾಣುತ್ತಾರೆ. ನಾನು ಈ ಕ್ಷೇತ್ರದ ಮಗಳಾಗಿ ಮಂತ್ರಿಯಾಗಿ ನನ್ನನ್ನು ನೀವೆಲ್ಲ ನೋಡುತ್ತಿದ್ದೀರಿ. ಹಾಗೆಯೇ ನನ್ನ ಕ್ಷೇತ್ರದ ಪ್ರತಿ ಮಗುವು ಸಹ ದೊಡ್ಡ ಸ್ಥಾನಕ್ಕೇರುವುದನ್ನು ನಾನು ನೋಡಬೇಕು ಎಂದು ಅವರು ಹೇಳಿದರು.
ನಾನೂ ನಿಮ್ಮ ಹಾಗೇ ಸರಕಾರಿ ಶಾಲೆಯಲ್ಲಿ ಕಲಿತವಳು. ಕೆಂಪು ಬಸ್ ನಲ್ಲಿ ಓಡಾಡಿದವಳು. ಇಂದು ರಾಜ್ಯದ ಮಂತ್ರಿಯಾಗಿದ್ದೇನೆ. ಈ ಗ್ರಾಮದ ಮಕ್ಕಳು ಸಹ ಉನ್ನತ ಸ್ಥಾನಕ್ಕೆ ಏರಬೇಕು ಎನ್ನುವುದು ನನ್ನ ಕನಸು. ನಿಮ್ಮ ಹೃದಯದಲ್ಲಿ ನನಗೆ ಸ್ಥಾನ ಕೊಟ್ಟಿದ್ದೀರಿ. ಹಾಗಾಗಿ ನಾನು ಇಲ್ಲಿಯ ಮಕ್ಕಳಿಗೆಲ್ಲ ತಾಯಿ ಸಮಾನ. ನನ್ನ ಈ ಮಕ್ಕಳ ಭವಿಷ್ಯ ನನಗೆ ಮುಖ್ಯ. ಅದಕ್ಕಾಗಿ ನೀವೆಲ್ಲ ಕಷ್ಟಪಟ್ಟು ಓದಬೇಕು. ಇನ್ನು 10 -15 ವರ್ಷದ ನಿಂತರ ನನ್ನ ಮುಂದೆ ಬಂದು ನಿಂತು ನಾನು ಡಾಕ್ಟರ್ ಆಗಿದ್ದೇನೆ, ಎಂಜಿನಿಯರ್ ಆಗಿದ್ದೇನೆ ಎಂದು ಹೇಳಬೇಕು. ಈ ಗ್ರಾಮದ ಹೆಸರನ್ನು ಉಜ್ವಲಗೊಳಿಸಬೇಕು ಎಂದು ಹೆಬ್ಬಾಳಕರ್ ಹೇಳಿದರು.