ಗಂಗಾವತಿ : ಸಿನಿಮೀಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಗಂಗಾವತಿ ನಗರದಲ್ಲಿ ನಡೆದಿದೆ.
ವೆಂಕಟೇಶ ಕುರುಬರ (31) ವರ್ಷ ಕೊಲೆಯಾದ ಬಿಜೆಪಿ ನಾಯಕ. ಕೊಪ್ಪಳ ರಸ್ತೆಯ ಲೀಲಾವತಿ ಎಲುಬು ಕೀಲು ಅಸ್ಪತ್ರೆಯ ಮುಂಭಾಗದಲ್ಲಿ ನಸುಕಿನ ಜಾವ 2 ಗಂಟೆಗೆ ಕಾರಿನಲ್ಲಿ ಆಗಮಿಸಿದ್ದ ಗ್ಯಾಂಗ್ ಕೊಲೆ ಮಾಡಿದೆ.
ದೇವಿಕ್ಯಾಂಪ್ನಿಂದ ಗಂಗಾವತಿಗೆ ವೆಂಕಟೇಶ್ ಅವರು ಸ್ನೇಹಿತರ ಜೊತೆ ಊಟ ಮಾಡಿ ಬೈಕಿನಲ್ಲಿ ಬರುತ್ತಿದ್ದರು. ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಗ್ಯಾಂಗ್ ಸದಸ್ಯರು ಬೈಕಿಗೆ ಗುದ್ದಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಡಿವೈಸ್ಪಿ ಸಿದ್ದನಗೌಡ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಕರಣದ ಬಗ್ಗೆ ವೆಂಕಟೇಶ ಸ್ನೇಹಿತ ರಾಮು ಪ್ರತಿಕ್ರಿಯಿಸಿ, ಸ್ನೇಹಿತರೆಲ್ಲರೂ ಊಟಕ್ಕೆ ಹೋಗಿದ್ದೆವು. ವಾಪಸ್ ಮರಳುತ್ತಿದ್ದಾಗ 7-8 ಜನ ಮಾರಕಾಸ್ತ್ರಗಳನ್ನು ಹಿಡಿದು ನಮ್ಮನ್ನು ಬೆದರಿಸಿ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಕೊಲೆಯಾದ ವೆಂಕಟೇಶ ಅವರು ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರ ಆಪ್ತರಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಜೆ ಎನ್ ಎನ್ ಕೇಬಲ್ ಚಾನೆಲ್ ಗೆ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದ ವೆಂಕಟೇಶ ಗಂಗಾವತಿಯಲ್ಲಿ ನಡೆದ ಕೋಮು ಸಂಘರ್ಷದ ಸಂದರ್ಭದಲ್ಲಿ ಅವರ ಮೇಲೆ ಕೇಸ್ ಸಹ ದಾಖಲಾಗಿತ್ತು.
ಕೃತ್ಯಕ್ಕೆ ಬಳಸಿದ್ದ ಇಂಡಿಕಾ ಕಾರನ್ನು ನಗರದ ಆನೆಗೊಂದಿ ರಸ್ತೆಯಲ್ಲಿ ಬ್ಯಾಂಕ್ ಎದುರಿನ ವಿಜಯನಗರ ಕಾಲೋನಿ ಬಳಿ ಬಿಟ್ಟು ಪರಾರಿಯಾಗಿದ್ದಾರೆ.