ಬೆಳಗಾವಿ :
ಐದು ವರ್ಷದ ಈ ಪುಟ್ಟ ಪೋರ ಕನ್ನಡ ಹಾಗೂ ಇಂಗ್ಲಿಷನಲ್ಲಿ ನಿರರ್ಗಳವಾಗಿ ಭಾಷಣ ಮಾಡುವುದು, ಒಂದು ಲಕ್ಷದವರೆಗೆ ಅಂಕಿಗಳನ್ನು ಹೇಳುವುದು ಹಾಗೂ ಜಗತ್ತಿನ ಅನೇಕ ವಿಜ್ಞಾನಿಗಳ ಹೆಸರನ್ನು ಥಟ್ ಅಂತ ಹೇಳುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ.
ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದ ಐದೂವರೆ ವರ್ಷದ ವೇದಾಂತ ಕೋಳಜಿಗೌಡ ಎಂಬ ಪುಟ್ಟ ಪೋರ ಯುಕೆಜಿ ಓದುತ್ತಿದ್ದಾನೆ. ಈ ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರೀಯ ಹಬ್ಬ, ಕರ್ನಾಟಕ ರಾಜ್ಯೋತ್ಸವದಲ್ಲಿ ಶಾಲೆಗೆ ಹೋಗಿ ಭಾಷಣ ಮಾಡುವ ಮೂಲಕ ಸಭಿಕರ ಮೆಚ್ಚುಗೆಗೆ ಕಾರಣನಾಗಿದ್ದಾನೆ.
ಜನೇವರಿ 26 ಗಣರಾಜ್ಯೋತ್ಸವದಂದು ಮುಚ್ಚಂಡಿ ಗ್ರಾಮದ ಸರ್ಕಾರಿ ಕನ್ನಡ ಮಾಧ್ಯಮ ಮಾದರಿ ಶಾಲೆಯಲ್ಲಿ ಇಂಗ್ಲಿಷ್ನಲ್ಲಿ ಸುಮಾರು ಮೂರು ನಿಮಿಷಕ್ಕೂ ಹೆಚ್ಚು ಹೊತ್ತು ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾನೆ. ಕರ್ನಾಟಕ ರಾಜ್ಯೋತ್ಸವದಂದು ಕನ್ನಡದಲ್ಲಿ ಭಾಷಣ ಮಾಡಿ ಕನ್ನಡಾಭಿಮಾನ ಮೆರೆದಿದ್ದಾನೆ.
ತಂದೆ ಪ್ರಕಾಶ ಕೋಳಜಿಗೌಡ ಧಾರವಾಡ ಹೈಕೋರ್ಟಿನಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದು, ತಾಯಿ ಅಶ್ವಿನಿ ಗೃಹಿಣಿ ಆಗಿದ್ದಾರೆ. ತಾಯಿ ಬಿ.ಇಡಿ ಕಲಿತಿದ್ದು, ಮಗು ವೇದಾಂತನಿಗೆ ಮನೆಯಲ್ಲಿಯೇ ಪಾಠ ಹೇಳಿ ಕೊಡುತ್ತಾರೆ. ತಾಯಿ ಕಲಿಸಿದ ಪಾಠ ಹಾಗೂ ಭಾಷಣವನ್ನು ನೆನಪಿನಲ್ಲಿ ಇಟ್ಟುಕೊಂಡು ನಿರರ್ಗಳವಾಗಿ ಮಾತನಾಡುವುದ್ದನ್ನು ರೂಢಿಸಿಕೊಂಡಿದ್ದಾನೆ.
ಭಾಷಣದ ಜತೆಗೆ ಒಂದು ಲಕ್ಷದ ವರೆಗೆ ಅಂಕಿಗಳನ್ನು ಬರೆಯುವುದರೊಂದಿಗೆ ಅದನ್ನೂ ಓದಿಯೂ ಹೇಳುತ್ತಾನೆ. ಜಗತ್ತಿನ ಖ್ಯಾತನಾಮ 40 ವಿಜ್ಞಾನಿಗಳ ಹೆಸರು ಹಾಗೂ ಅವರ ಸಂಶೋಧನೆಯನ್ನು ಹೇಳುತ್ತಾನೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಈ ಮಗುವಿನ ಭಾಷಣ ಕೇಳಿ ಎಲ್ಲರೂ ನಿಬ್ಬೆರಗಾಗಿದ್ದಾರೆ.
ಸದ್ಯ ಮುಚ್ಚಂಡಿಯ ಸರ್ಕಾರಿ ಕನ್ನಡ ಶಾಲೆಯಲ್ಲಿಯೇ ಯುಕೆಜಿ ಓದುತ್ತಿದ್ದು, ಈ ಮಗುವಿನ ಪ್ರತಿಭೆ ಮೆಚ್ಚಿ ಮುಖ್ಯೋಪಾಧ್ಯಾಯ ಎಸ್.ಜಿ. ಚವಲಗಿ, ಗ್ರಾಪಂ ಅಧ್ಯಕ್ಷ ಅನಿತಾ ಒಡೆಯರ, ಸಿದ್ರಾಯಿ ಹುಲಕಾಯಿ ಸೇರಿದಂತೆ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.