ಬೆಳಗಾವಿ : ನಾನು ಎಂಜಿನಿಯರಿಂಗ್ ಪದವೀಧರನಾಗಿದ್ದು, ಬೆಳಗಾವಿ ಜಿಲ್ಲೆಯ ಕುರಿತು ಸ್ಪಷ್ಟ ಕಲ್ಪನೆ ಹೊಂದಿದ್ದೇನೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯ ವಿಷಯವನ್ನು ಮುಂದಿಟ್ಟುಕೊಂಡು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ ಕೇಳುವುದಾಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ತಿಳಿಸಿದ್ದಾರೆ.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮುತಗಾ, ಶಿಂದೊಳ್ಳಿ, ಬಸರಿಕಟ್ಟಿ ಮೊದಲಾದ ಗ್ರಾಮಗಳಲ್ಲಿ ಅವರು ಗುರುವಾರ ಪ್ರಚಾರ ಕೈಗೊಂಡು, ಮತಯಾಚನೆ ಮಾಡಿದರು. ಈ ದೇಶವನ್ನು ಕಟ್ಟುವಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಸಾಕಷ್ಟಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ, ದೇಶ ಮತ್ತು ರಾಜ್ಯದಲ್ಲಿ ಅಭಿವೃದ್ಧಿ ಮಾಡಿದೆ. ತಾಯಿ ಲಕ್ಷ್ಮೀ ಹೆಬ್ಬಾಳಕರ್ ಅರು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಾಕಷ್ಟುಅಭಿವೃದ್ಧಿ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಹಲವಾರು ಯೋಜನೆಗಳನ್ನು ತರುವ ಮೂಲಕ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು ಎಂದು ಅವರು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಕಾಂಗ್ರೆಸ್ ಪಕ್ಷ ದೇಶವನ್ನಾಗಲಿ, ಜನರನ್ನಾಗಲಿ ಎಂದೂ ಒಡೆಯುವ ಕೆಲಸ ಮಾಡುವುದಿಲ್ಲ. ನಾವು ಜೋಡಿಸುವ ಕೆಲಸ ಮಾಡುತ್ತೇವೆ. ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವ, ತಾರತಮ್ಯವಿಲ್ಲದೆ ಅಭಿವೃದ್ಧಿ ಮಾಡುವ ಪಕ್ಷ ನಮ್ಮದು. ಹಾಗಾಗಿಯೇ ಯಾವುದೇ ತಾರತಮ್ಯ ಮಾಡದೆ ಸಮಾಜದ ಎಲ್ಲರಿಗೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ರಾಜ್ಯದ ಪ್ರತಿಯೊಂದು ಕುಟುಂಬವೂ ಗ್ಯಾರಂಟಿ ಯೋಜನೆಗಳ ಲಾಭ ಪಡೆದುಕೊಂಡಿವೆ. ಮುಂದಿನ ದಿನಗಳಲ್ಲಿ ನಮ್ಮ ಯುವಕರಿಗೆ ಉದ್ಯೋಗ ನೀಡುವ ಯೋಜನೆಗಳನ್ನು ತರುವ ಕನಸಿದೆ. ಹಾಗಾಗಿ ಯುವಕನಾಗಿರುವ ಮೃಣಾಲ ಹೆಬ್ಬಾಳಕರ್ ಗೆ ಮತ ನೀಡುವ ಮೂಲಕ ಸಮಗ್ರ ಅಭಿವೃದ್ಧಿಗೆ ಸಹಕರಿಸಿ ಎಂದು ವಿನಂತಿಸಿದರು.
ಕೇಂದ್ರದ ಅನುದಾನ ತರಲು ಕ್ರಮ -ಚನ್ನರಾಜ ಹಟ್ಟಿಹೊಳಿ
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ವಿಧಾನಸಭೆಯ ಚುನಾವಣೆಯಲ್ಲಿ ಸುಳ್ಳು ಹೇಳುತ್ತ ಪ್ರಚಾರ ಮಾಡಿದವರನ್ನು ನೋಡಿದ್ದೀರಿ ಮತ್ತು ಅವರಿಗೆ ತಕ್ಕ ಪಾಠ ಕಲಿಸಿದ್ದೀರಿ. ಈ ಬಾರಿಯೂ ಅದೇ ರೀತಿಯಲ್ಲಿ ನಮ್ಮನ್ನು ಬೆಂಬಲಿಸುವ ಮೂಲಕ ಕ್ಷೇತ್ರವನ್ನು ಮತ್ತು ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸಹಾಕರ ನೀಡಿ ಎಂದು ವಿನಂತಿಸಿದರು.
ರಾಜ್ಯಸರಕಾರದ ಎಲ್ಲ ಯೋಜನೆಗಳನ್ನೂ ಬಳಸಿಕೊಂಡು ನಾವು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದೇವೆ. ಮೃಣಾಲ ಹೆಬ್ಬಾಳಕರ್ ಅವರನ್ನು ಆಯ್ಕೆ ಮಾಡಿ ಕಲಿಸಿದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಸರಕಾರದ ಯೋಜನೆಗಳ ಜೊತೆಗೆ ಕೇಂದ್ರದಿಂದಲೂ ಹೆಚ್ಚಿನ ಅನುದಾನ ತರಲಿದ್ದಾನೆ. ಹಾಗಾಗಿ ದೊಡ್ಡ ಪ್ರಮಾಣದ ಅಂತರದಿಂದ ಮೃಣಾಲ ಹೆಬ್ಬಾಳಕರ್ ಅವರನ್ನು ಆಯ್ಕೆ ಮಾಡಿ ಎಂದು ಚನ್ನರಾಜ ಹೇಳಿದರು.
ನಾಗೇಶ್ ದೇಸಾಯಿ, ಶ್ಯಾಮ್ ಮುತಗೇಕರ್, ಗಜಾನನ ಕಣಬರ್ಕರ್, ಶ್ಯಾಮರಾವ್ ಪಾಟೀಲ, ಪಿಂಟು ಮಲ್ಲವ್ವಗೋಳ, ಭರಮಾ ಮಲ್ಲವ್ವಗೋಳ, ವಿಶಾಲ ಪಾಟೀಲ, ಭೀಮ ಓಬಣ್ಣಗೋಳ, ಸ್ನೇಹಲ್ ಪೂಜಾರಿ, ಮಾಧುರಿ ಮುತಗೇಕರ್, ಶೀಲಾ ಮಲ್ಲವ್ವಗೋಳ, ಕೃಷ್ಣ ಮಲ್ಲವ್ವಗೋಳ, ಶಿವು ಸೈಬಣ್ಣವರ, ರಾಜೇಶ್ ಪಾಟೀಲ, ಸುರೇಶ ಪಾಟೀಲ, ಶೀಲಾ ತಿಪ್ಪಣ್ಣಗೋಳ, ಮಲ್ಲಪ್ಪ ಶಹಾಪೂರಕರ್, ಬೀರಾ ಅನಗೋಳ್ಕರ್, ಕೃಷ್ಣ ಅನಗೋಳ್ಕರ್, ದಿಲೀಪ್ ಕೊಂಡಸಕೊಪ್ಪ, ಹೊಳೆಪ್ಪ ಪೂಜೇರಿ, ಬಸವಣ್ಣಿ ಕೊಂಡಸಕೊಪ್ಪ, ಸಿದ್ರಾಯಿ ನಾಗರೊಳ್ಳಿ, ಪರುಶರಾಮ ಕಲ್ಲನಾಂಚೆ, ಯಶವಂತ ಕೋಲಕಾರ, ದೇವೇಂದ್ರ ಸುಳೇಭಾವಿ, ಪಾಪು ಕೋಲಕಾರ, ಯಲ್ಲಪ್ಪ ಸಾಂಬ್ರೇಕರ್, ಯಲ್ಲಪ್ಪ ಚೌಗುಲೆ, ರಾಮಾ ಬೈಲವಾಡ, ಗೋವಿಂದ ಮೊದಲಾದವರು ಉಪಸ್ಥಿತರಿದ್ದರು.