ವಿಜಯಪುರ : ವಿಜಯಪುರದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅವರ ಆರೋಗ್ಯದಲ್ಲಿ ಏರು ಪೇರಾಗಿದ್ದು, ಅವರನ್ನು ಬೆಳಗಾವಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರಿಗೆ ಮೆದುಳಿನ ರಕ್ತ ಸ್ರಾವ ಸಂಭವಿಸಿದೆ ಎಂದು ವರದಿಯಾಗಿದೆ. ಜಿಗಜಿಣಗಿ ಅವರನ್ನು ಬೆಳಗಾವಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
71 ವರ್ಷದ ರಮೇಶ ಜಿಗಜಿಣಗಿ ಕರ್ನಾಟಕದ ರಾಜ್ಯದ ಶಾಸಕ, ಸಂಸದ, ರಾಜ್ಯ ಮತ್ತು ಕೇಂದ್ರದ ಸಚಿವರಾಗಿದ್ದರು.
ಈ ಮೊದಲು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರವನ್ನು ಮೂರು ಸಲ ಗೆಲುವು ಸಾಧಿಸಿದ್ದರು.
ರಮೇಶ್ ಜಿಗಜಿಣಗಿ ಅವರು 1998, 1999 ಮತ್ತು 2004ರಲ್ಲಿ ಚಿಕ್ಕೋಡಿ (ಲೋಕ ಸಭೆ ಚುನಾವಣಾ ಕ್ಷೇತ್ರ)ದಿಂದ ಆಯ್ಕೆಯಾಗಿದ್ದರು. 2009, 2014 ಮತ್ತು 2019ರಲ್ಲಿ ನಡೆದ ಚುನಾವಣೆಯಲ್ಲಿ ವಿಜಯಪುರ ಲೋಕ ಸಭಾ ಕ್ಷೇತ್ರದಿಂದ ಸಂಸದರಾಗಿ ಲೋಕಸಭೆಗೆ ಆಯ್ಕೆಯಾಗಿದ್ದರು. 1983 ರಿಂದ 98ರ ತನಕ ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ರಮೇಶ ಜಿಗಜಿಣಗಿ ಅವರಿಗೆ ಕಾಡುತ್ತಿರುವ ಅನಾರೋಗ್ಯ : ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರನ್ನು ಮೂರು ದಿನಗಳ ಹಿಂದೆ ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿನಲ್ಲಿ ರಕ್ತಸ್ರಾವ ಆಗಿದ್ದರಿಂದ ಅವರನ್ನು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ಯಾವುದೇ ಅವರ ಆರೋಗ್ಯದಲ್ಲಿ ಯಾವ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಅವರ ಭೇಟಿಗೆ ಯಾರಿಗೂ ಅವಕಾಶ ನೀಡುತ್ತಿಲ್ಲ.
ಜನವರಿ 28ರಂದು ಸಹಾ ರಮೇಶ ಜಿಗಜಿಣಗಿ ವಿಜಯಪುರದಿಂದ ಬೆಳಗಾವಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಏಕಾಏಕಿ ಉಸಿರಾಟ ಸಮಸ್ಯೆ ಆಗಿತ್ತು. ಆಗ ಅವರನ್ನು ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ತಪಾಸಣೆ ಮಾಡಿ ಆಕ್ಸಿಜನ್ ಲೆವೆಲ್ ಕಡಿಮೆಯಾಗಿದೆ, ಈ ಹಿನ್ನೆಲೆಯಲ್ಲಿ ಹಾರ್ಟ್ ಬಿಟ್ ವ್ಯತ್ಯಾಸ ಆಗಿತ್ತು ಎಂದು ಹೇಳಿದ್ದರು. ಆದರೆ ಇದೀಗ ಮತ್ತೆ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ.