ಕೊಪ್ಪಳ :
ಕೊಪ್ಪಳ ಮಾರ್ಗವಾಗಿ ಹೊಸಪೇಟೆವರೆಗೆ ಸಂಚರಿಸಲಿರುವ ಮುಂಬೈ-ಗದಗ ಹಾಗೂ ಸೊಲ್ಲಾಪುರ-ಗದಗ ರೈಲುಗಳ ಸೇವೆ ವಿಸ್ತರಣೆಗೆ ಆಗಸ್ಟ್ 29 ರಂದು ವಿದ್ಯುಕ್ತ ಚಾಲನೆ ಸಿಕ್ಕಿತು. ಈ ಎರಡು ರೈಲುಗಳು ಹೊಸದಾಗಿ ಕೊಪ್ಪಳ ಮಾರ್ಗವಾಗಿ ಸಂಚರಿಸುವುದಕ್ಕೆ ಸಂಸದ ಕರಡಿ ಸಂಗಣ್ಣ ಅವರು ಕೊಪ್ಪಳ ಮತ್ತು ಹುಲಗಿ ನಿಲ್ದಾಣಗಳಲ್ಲಿ ಹಸಿರು ನಿಶಾನೆ ತೋರಿದರು.
ಎರಡೂ ನಿಲ್ದಾಣಗಳಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಿ ರೈಲು ಸೇವೆ ವಿಸ್ತರಣೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹ ಸಂಸದರು ಭಾಗಿಯಾದರು.
ಮುಂಬೈ-ಗದಗ ಹಾಗೂ ಸೊಲ್ಲಾಪುರ-ಗದಗ ರೈಲುಗಳ ಸೇವೆಯನ್ನು ಕೊಪ್ಪಳದವರೆಗೆ ವಿಸ್ತರಿಸಬೇಕು ಎಂಬುದು ಬಹಳ ದಿನಗಳ ಬೇಡಿಕೆಯಾಗಿತ್ತು. ಈಗ ಆ ಬೇಡಿಕೆ ಸಾಕಾರಗೊಂಡಿದೆ.
ಗದಗ, ಹುಬ್ಬಳ್ಳಿವರೆಗೆ ಪ್ರಯಾಣಿಸಿ ಪುಣೆ ಸೊಲ್ಲಾಪುರಗೆ ಹೋಗುವುದು ಇನ್ಮುಂದೆ ತಪ್ಪಲಿದೆ. ಈ ಎರಡು ರೈಲ್ವೆ ಸೇವೆಗಳ ವಿಸ್ತರಣೆಯಿಂದಾಗಿ ಜಿಲ್ಲೆಯ ಜನ ಸಂಚಾರಕ್ಕೆ ಸಾಕಷ್ಟು ಅನುಕೂಲವಾಗಲಿದೆ. ಸಮಯ ಸಾಕಷ್ಟು ಉಳಿತಾಯವಾಗಲಿದೆ. ಹೊಸಪೇಟೆ ರೈಲ್ವೆ ಹೋರಾಟ ಸಮಿತಿ ಹಾಗೂ ಕೊಪ್ಪಳ, ಬಳ್ಳಾರಿ, ಬಾಗಲಕೋಟೆ ಮತ್ತು ವಿಜಯಪುರ ಸಂಸದರ ಮನವಿಗೆ ಸ್ಪಂದಿಸಿ ರೈಲ್ವೆ ಇಲಾಖೆಯು ರೈಲು ಸೇವೆಯನ್ನು ವಿಸ್ತರಿಸಿ ಆದೇಶ ಹೊರಡಿಸಿರುವುದು ಸಂತಸ ತಂದಿದೆ ಎಂದು ಸಂಸದರು ಪ್ರತಿಕ್ರಿಯಿಸಿದರು.
ಮುಂಬೈ-ಗದಗ ರೈಲು ಸಂಚಾರವನ್ನು ಹೊಸಪೇಟೆವರೆಗೆ ವಿಸ್ತರಿಸಲಾಗಿದೆ. ಅದೇ ರೀತಿ ಸೊಲ್ಲಾಪುರ-ಗದಗ ರೈಲನ್ನು ಸಹ ಹೊಸಪೇಟೆವರೆಗೆ ವಿಸ್ತರಿಸಲಾಗಿದೆ.
ಈ ಎರಡು ರೈಲ್ವೆ ಸೇವೆಗಳ ವಿಸ್ತರಣೆಯಿಂದಾಗಿ ಕೊಪ್ಪಳ ಜಿಲ್ಲೆಯ ಜನರ ಸಂಚಾರಕ್ಕೆ ಸಾಕಷ್ಟು ಅನುಕೂಲವಾಗಲಿದೆ. ಕೊಪ್ಪಳ ಜಿಲ್ಲೆಯಲ್ಲಿನ ವಾಣಿಜ್ಯ ವಹಿವಾಟುಗಳು ಗದಗ ದಾಟಿ ಪುಣೆ, ಸೊಲ್ಲಾಪುರ, ಮುಂಬೈವರೆಗೆ ವಿಸ್ತರಣೆಯಾಗಿ ವ್ಯಾಪಾರಸ್ಥರು, ಉದ್ಯಮಿಗಳು ಸೇರಿದಂತೆ ಎಲ್ಲಾ ವರ್ಗದ ಜನರಿಗೂ ಅನುಕೂವಾಗಲಿದೆ.
ಇದಕ್ಕೆ ಅವಕಾಶ ಕಲ್ಪಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಹಾಗೂ ರೈಲ್ವೆ ಸಚಿವರಿಗೆ ಕೊಪ್ಪಳ ಜಿಲ್ಲೆಯ ಜನರ ಪರವಾಗಿ ಅಭಿನಂದನೆ ತಿಳಿಸುವೆ. ಈ ಪ್ರಯತ್ನಕ್ಕೆ ಬಳ್ಳಾರಿ, ಬಾಗಲಕೋಟೆ, ವಿಜಯಪುರ ಸಂಸದರು ನೀಡಿದ ಸಹಕಾರವನ್ನು ಸದಾಕಾಲ ಸ್ಮರಿಸುವುದಾಗಿ ಅವರು ಹೇಳಿದರು.
ಮುಂಬೈ-ಹೊಸಪೇಟೆ ರೈಲ್ವೆ (ಸಂಖ್ಯೆ-11139) ಪ್ರತಿ ದಿನ ರಾತ್ರಿ ಮುಂಬೈನಿಂದ 9.20ಕ್ಕೆ ಹೊರಟು ಪುಣೆ, ಸೊಲ್ಲಾಪುರ, ವಿಜಯಪುರ, ಗದಗ ಕೊಪ್ಪಳ ಮಾರ್ಗವಾಗಿ ಹೊಸಪೇಟೆಗೆ ಸಂಚರಿಸಲಿದೆ. ಅದೇ ದಿನ ಮಧ್ಯಾಹ್ನ 12.45ಕ್ಕೆ ಹೊಸಪೇಟೆಯಿಂದ ಹೊರಟು ಕೊಪ್ಪಳ ಮಾರ್ಗವಾಗಿ ಮರಳಿ ಮುಂಬೈಗೆ ನಿರ್ಗಮಿಸಲಿದೆ. ಸೊಲ್ಲಾಪುರ-ಹೊಸಪೇಟೆ ರೈಲ್ವೆ (ಸಂಖ್ಯೆ 11305/306) ಪ್ರತಿ ದಿನ ಬೆಳಗ್ಗೆ 11.50ಕ್ಕೆ ಸೊಲ್ಲಾಪುರದಿಂದ ಹೊರಟು ವಿಜಯಪುರ, ಗದಗ, ಕೊಪ್ಪಳ ಮಾರ್ಗವಾಗಿ ರಾತ್ರಿ 10 ಗಂಟೆಗೆ ಹೊಸಪೇಟೆಗೆ ಆಗಮಿಸಲಿದೆ. ಅದೇ ದಿನ ರಾತ್ರಿ 12.15ಕ್ಕೆ ಹೊಸಪೇಟೆಯಿಂದ ನಿರ್ಗಮಿಸಿ ಕೊಪ್ಪಳ ಮಾರ್ಗವಾಗಿ ಸೊಲ್ಲಾಪುರಗೆ ತೆರಳಲಿದೆ. ಹೀಗೆ ಮತ್ತೆರಡು ರೈಲುಗಳು ಹೊಸದಾಗಿ ಕೊಪ್ಪಳ ರೈಲ್ವೆ ಮಾರ್ಗಕ್ಕೆ ಬರುತ್ತಿರುವುದು ಸಾಕಷ್ಟು ಸಂತಸವನ್ನುಂಟು ಮಾಡಿದೆ ಎಂದು ಸಂಸದರು ಹರ್ಷ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಹಾಗೂ ರೈಲ್ವೆ ಸಚಿವರ ದೂರದೃಷ್ಟಿಯಿಂದಾಗಿ ವಿವಿಧ ಯೋಜನೆಗಳು ಕಾರ್ಯನುಷ್ಠಾನವಾಗಿ ರೈಲ್ವೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಆಗುತ್ತಿದೆ. ಹೊಸ ಮಾರ್ಗಗಳು, ವಿದ್ಯುತ್ತೀಕರಣ ಜೊತೆಗೆ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಒತ್ತು ಕೊಟ್ಟಿದ್ದರಿಂದ ಸಾಕಷ್ಟು ಬದಲಾವಣೆಗಳಾಗಿವೆ. ಜಿಲ್ಲೆಯ ವಿವಿಧೆಡೆ ಮೇಲ್ಸೇತುವೆಗಳ ನಿರ್ಮಾಣ, ಇನ್ನೀತರ ಕಡೆಗಳಲ್ಲಿ ಹೊಸದಾಗಿ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿರುವುದು, ಕೊಪ್ಪಳ, ಹುಲಿಗಿ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಹಸಿರು ನಿಶಾನೆ ನೀಡಿರುವುದು ಸೇರಿದಂತೆ ರೈಲ್ವೆಗೆ ಸಂಬಂಧಿಸಿದಂತೆ ಇನ್ನೀತರ ಅನೇಕ ಕಾರ್ಯಗಳಿಂದಾಗಿ ಕೊಪ್ಪಳ ಜಿಲ್ಲೆಯ ಜನತೆಗೆ ಸಾಕಷ್ಟು ಅನುಕೂಲವಾಗಿದೆ ಎಂದು ಸಂಸದ ಕರಡಿ ಸಂಗಣ್ಣ ಅವರು ಪ್ರತಿಕ್ರಿಯಿಸಿದರು.
ಕೊಪ್ಪಳ, ಹುಲಗಿ ಮತ್ತು ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಮುಖಂಡರು ಮತ್ತು ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.