ಬೆಳಗಾವಿ : ನಾವಗೆ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಾರ್ಖಾನೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಇಂದು ಕಾರ್ಖಾನೆಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ , ಸ್ಥಳ ಪರಿಶೀಲನೆ ನಡೆಸಿ, ಸಂಬಂಧಿಸಿದಂತೆ ಮಾಲಿಕರು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿದರು.
ಘಟನೆಯ ಸಂಪೂರ್ಣ ಮಾಹಿತಿ ಪಡೆದು, ಈ ರೀತಿ ಮತ್ತೆ ಅವಘಡಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಮತ್ತು ಕಾರ್ಮಿಕರ ಹಿತಾಸಕ್ತಿ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದರು.
ಕಾರ್ಖಾನೆಯ ಬೆಂಕಿ ಅವಘಡದಿಂದಾಗಿ ಮಾರ್ಕಂಡೇಯ ನಗರದ ಯುವಕ ಯಲ್ಲಪ್ಪ ಗುಂಡ್ಯಾಗೋಳ ಮರಣ ಹೊಂದಿದ ಹಿನ್ನೆಲೆಯಲ್ಲಿ ಮೃತ ಯುವಕನ ಮನೆಗೆ ಭೇಟಿ ನೀಡಿ, ಅವರ ತಂದೆ-ತಾಯಿ ಮತ್ತು ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ಎಲ್ಲ ಕಾರ್ಖಾನೆಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ತುಂಬಾ ಮುಖ್ಯ. ಕಾರ್ಮಿಕರ ಪ್ರಾಣಹಾನಿಯಾಗದಂತೆ ಸೂಕ್ತ ಕ್ರಮಗಳನ್ನು ಕಾರ್ಖಾನೆಗಳು ಕಡ್ಡಾಯವಾಗಿ ಅನುಸರಿಸಬೇಕು. ಮಾಲಿಕರು ಕಾರ್ಮಿಕರ ಯೋಗಕ್ಷೇಮದ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ಸಂಜಯ ಪಾಟೀಲ, ಮುಖಂಡರಾದ ಧನಂಜಯ ಜಾಧವ್, ಚೇತನ ಅಂಗಡಿ, ಹೇಮಂತ ಪಾಟೀಲ, ನಾಗೇಂದ್ರ ದೇಸಾಯಿ, ನಾಗೇಂದ್ರ ನಾಯಕ, ಸಂತೋಷ ದೇಸಾಯಿ, ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.