ಬೆಳಗಾವಿ: ಸಂಚಾರದಟ್ಟಣೆ ಗಮನದಲ್ಲಿ ಇಟ್ಟುಕೊಂಡು, ಜಿಲ್ಲೆಯ ನಾಲ್ಕು ಮುಖ್ಯ ರಸ್ತೆಗಳನ್ನು ಚತುಷ್ಪಥ ಅಥವಾ ಷಟ್ಟಥ ರಸ್ತೆಗಳಾಗಿ ವಿಸ್ತರಿಸುವ ಕುರಿತು ಪ್ರಸ್ತಾವ ಸಿದ್ಧಪಡಿಸಿ, ರಾಜ್ಯ ಸರ್ಕಾರಕ್ಕೆ ಕಳುಹಿಸಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಸೂಚಿಸಿದರು.
ಲೋಕೋಪಯೋಗಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಶುಕ್ರವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
‘ಸಂಕೇಶ್ವರದಿಂದ ಹುಕ್ಕೇರಿ, ಗೋಕಾಕ, ಯರಗಟ್ಟಿ, ಮುನವಳ್ಳಿ, ನರಗುಂದ ಮಾರ್ಗವಾಗಿ ರಾಮದುರ್ಗದವರೆಗಿನ ರಸ್ತೆ, ಗೋಕಾಕದಿಂದ ಯರಗಟ್ಟಿ, ಸವದತ್ತಿ ಮಾರ್ಗವಾಗಿ ಧಾರವಾಡದವರೆಗಿನ ರಸ್ತೆ, ಬೆಳಗಾವಿಯಿಂದ ಸಾವಂತವಾಡಿ ಮಾರ್ಗವಾಗಿ ಗೋವಾದ ಮಾಪುಸಾವರೆಗಿನ ರಸ್ತೆ, ರಬಕವಿಯಿಂದ ಗೋಕಾಕ, ಬೆಳಗಾವಿ ಮಾರ್ಗವಾಗಿ ಜಾಂಬೋಟಿವರೆಗಿನ ರಸ್ತೆ ವಿಸ್ತರಣೆ ಸಂಬಂಧ ಪ್ರಸ್ತಾವ ಸಿದ್ಧಪಡಿಸಿ, ಸರ್ಕಾರಕ್ಕೆ ಕಳುಹಿಸಿ’ ಎಂದರು.
‘ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾದ ನಂತರ, ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಭೇಟಿಯಾಗಿ ಅನುಮೋದನೆ ಪಡೆಯಲು ಪ್ರಯತ್ನಿಸುತ್ತೇನೆ’ ಎಂದು ಹೇಳಿದರು.
ಜಿಲ್ಲೆಯಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಗಳ ಸ್ಥಿತಿಗತಿ ಕುರಿತು ಚರ್ಚಿಸಿದರು.
ಲೋಕೋಪಯೋಗಿ ಇಲಾಖೆ ಬೆಳಗಾವಿ ವೃತ್ತದ ಅಧೀಕ್ಷಕ ಎಂಜಿನಿಯರ್ ಅರುಣ ಪಾಟೀಲ, ಬೆಳಗಾವಿ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಸ್.ಸೊಬರದ, ಚಿಕ್ಕೋಡಿ ಕಾರ್ಯನಿರ್ವಾಹಕ ಎಂಜಿನಿಯರ್ ಗಿರೀಶ ದೇಸಾಯಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ರಾಜೇಂದ್ರ ಪಾಟೀಲ ಇತರರಿದ್ದರು.