ಬೆಳಗಾವಿ: ಬೆಳಗಾವಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ದೆಹಲಿಯ ನೂತನ ಸಂಸದ ಭವನದ ಅವರ ಕಚೇರಿಯಲ್ಲಿ ಭೇಟಿ ಮಾಡಿ, ಬೆಳಗಾವಿ ರೈಲು ನಿಲ್ದಾಣವನ್ನು ನಾಗನೂರು ರುದ್ರಾಕ್ಷಿಮಠದ ಡಾ. ಶಿವಬಸವ ಸ್ವಾಮೀಜಿಯವರ ಹೆಸರಿನಲ್ಲಿ ಬೆಳಗಾವಿ ರೈಲು ನಿಲ್ದಾಣವೆಂದು ನಾಮಕರಣ ಮಾಡುವ ಬಗ್ಗೆ ವಿಷಯ ಪ್ರಸ್ತಾಪಿಸಿದರು.
ಪ್ರಸ್ತಾಪಿತ ರೈಲು ನಿಲ್ದಾಣವನ್ನು ಡಾ. ಶಿವಬಸವ ಸ್ವಾಮೀಜಿ ಬೆಳಗಾವಿ ರೈಲು ನಿಲ್ದಾಣವೆಂದು ನಾಮಕರಣ ಮಾಡುವದು ಇಲ್ಲಿನ ನಿವಾಸಿಗಳ ಅನೇಕ ದಿನಗಳ ಬೇಡಿಕೆಯಾಗಿದ್ದು, ಈ ಹಿನ್ನಲೆಯಲ್ಲಿ ಈಗಾಗಲೇ ಸಂಬಂಧಿತ ಪ್ರಸ್ತಾವನೆ ಕರ್ನಾಟಕ ಸರಕಾರದಿಂದ ದೆಹಲಿ ಗೃಹ ಸಚಿವಾಲಯಕ್ಕೆ ತಲುಪಿದೆ.
ಈ ಬಗ್ಗೆ ರೇಲ್ವೆ ಸಚಿವಾಲಯದಿಂದಲೂ ಸಹ ಅಭಿಮತ ವ್ಯಕ್ತಪಡಿಸಿ, ಪ್ರಸ್ತಾವನೆಯನ್ನು ಗೃಹ ಸಚಿವಾಲಯಕ್ಕೆ ಕಳುಹಿಸಿದ್ದಲ್ಲಿ ಶೀಘ್ರ ರೈಲು ನಿಲ್ದಾಣ ನಾಮಕರಣವಾಗಿದ್ದಲ್ಲಿ ಅನುಕೂಲವಾಗುವುದೆಂದು ಸಂಸದರ ಪ್ರಸ್ತಾಪಕ್ಕೆ ಕೇಂದ್ರ ರೇಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಅದರಂತೆ ಬೆಳಗಾವಿ – ಬೆಂಗಳೂರು ನಡುವೆ ಸದ್ಯ ಸಂಚರಿಸುತ್ತಿರುವ ವಂದೇ ಭಾರತ ರೈಲು ಬೆಳಗಾವಿಯಿಂದ ನಿರ್ಗಮನದ ಸಮಯವನ್ನು ಬೆಳ್ಳಿಗ್ಗೆ : 5.20 ಬದಲಾಗಿ 6.15 ಕ್ಕೆ ಪರಿವರ್ತಿಸುವ ಕುರಿತು ಪ್ರಯಾಣಿಕರ ಬೇಡಿಕೆ ಇರುವ ವಿಷಯ ತಿಳಿಸಿದಾಗ ಕೇಂದ್ರ ರೇಲ್ವೆ ಸಚಿವರು ಬೆಳಗಾವಿ ನಿವಾಸಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿಯೇ ವಿಷಯ ಪರಿಗಣನೆಗೆ ತೆಗೆದುಕೊಳ್ಳುವುದಾಗಿ ತಿಳಿಸಿದರು. ಇನ್ನು ಬೆಂಗಳೂರು – ಬೆಳಗಾವಿ – ಮುಂಬೈ ನಡುವೆ ಶೀಘ್ರ ಸೂಪರ್ ಪಾಸ್ಟ್ ರೈಲು ಸಂಚಾರ ಸಹ ಪ್ರಾರಂಭಿಸುವಂತೆ ಸಂಸದರು ವಿನಂತಿಸಿದರು.
ಲೋಕಾಪುರ – ರಾಮದುರ್ಗ – ಸವದತ್ತಿ – ಧಾರವಾಡ ನಡುವೆ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಪೂರಕವಾಗಿ ನಡೆಸುವ ಸಮೀಕ್ಷೆಯ ಕುರಿತು ಪ್ರಸ್ತಾವನೆಗೆ ಶೀಘ್ರ ಅನುಮೋದನೆ ನೀಡುವ ಬಗ್ಗೆಯೂ ಚರ್ಚಿಸಿದರು. ಈ ಕುರಿತು ಸಹ ಅನುಮೋದನೆ ನೀಡುವ ಭರವಸೆಯನ್ನು ಅಶ್ವಿನಿ ವೈಷ್ಣವ್ ಅವರು ಚರ್ಚೆಯ ಸಮಯದಲ್ಲಿ ತಿಳಿಸಿದರು. ಇದೇ ವಿಷಯವಾಗಿ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರೊಂದಿಗೂ ಸಂಸದ ಜಗದೀಶ ಶೆಟ್ಟರ್ ಚರ್ಚೆ ನಡೆಸಿದರು.


