ಬೆಂಗಳೂರು: ಡೆಂಗ್ಯೂ ರಾಜ್ಯಾದ್ಯಂತ ಹರಡುತ್ತಿದ್ದು, ಅದರ ನಿಯಂತ್ರಣಕ್ಕೆ ಕೋವಿಡ್ ಮಾದರಿಯಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಆಗಬೇಕು. ಇದನ್ನು ‘ವೈದ್ಯಕೀಯ ತುರ್ತು ಸ್ಥಿತಿ’ ಎಂದು ಘೋಷಿಸಬೇಕು ಎಂದು ಬಿಜೆಪಿ ಸಂಸದ ಡಾ. ಸಿ.ಎನ್. ಮಂಜುನಾಥ ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡೆಂಗ್ಯೂ ಜ್ವರ ನಿಯಂತ್ರಣ ಮಾಡಬೇಕಿದ್ದರೆ ಸೊಳ್ಳೆಗಳ ನಿಯಂತ್ರಣ ಮಾಡಬೇಕು. ಡೆಂಗ್ಯೂ ಕಾಯಿಲೆಗೆ ನಿಖರವಾದ ಚಿಕಿತ್ಸೆ ಇಲ್ಲ. ಸೊಳ್ಳೆಗಳ ನಿಯಂತ್ರಣವೇ ಮುಖ್ಯ. ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಬಾರದಿದ್ದರೆ ಮಾರಕ ಕಾಯಿಲೆಗಳಾದ ಚಿಕೂನ್ ಗುನ್ಯಾ, ಝೀಕಾ ವೈರಸ್ ಕಾಯಿಲೆ ಸಹ ಬರಬಹುದು ಎಂದು ಅವರು ಎಚ್ಚರಿಸಿದರು.
ಸೊಳ್ಳೆ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಸ್ಥಲೀಯ ಸಂಸ್ಥೆಗಳು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೆಲಸ ಮಾಡಬೇಕಿದೆ. ಡೆಂಗ್ಯೂ ನಿಯಂತ್ರಣಕ್ಕೆ ಒಂದು ಟಾಸ್ಕ್ ಫೋರ್ಸ್ ರಚಿಸಬೇಕಿದೆ ಎಂದು ತಿಳಿಸಿದರು. ಈ ಟಾಸ್ಕ್ ಫೋರ್ಸ್, ಪರಿಣತರಿಂದ ಸಲಹೆ ಪಡೆಯಬೇಕು ಎಂದು ಸಲಹೆ ನೀಡಿದರು.
ಡೆಂಗ್ಯೂಗೆ ವೈದ್ಯಕೀಯ ಸಿಬ್ಬಂದಿ ಸೇರಿದಂತೆ 6-7 ಜನರು ಸತ್ತಿದ್ದು, ಸಾವಿರಾರು ಜನ ಸೋಂಕಿತರಿದ್ದಾರೆ. ಮಕ್ಕಳಲ್ಲೂ ಡೆಂಗ್ಯೂ ಜ್ವರ ಹೆಚ್ಚಾಗುತ್ತಿದೆ. ಆದ್ದರಿಂದ ಎಲ್ಲ ಶಾಲೆ- ಕಾಲೇಜುಗಳಿಗೆ ಸುತ್ತೋಲೆ ಕಳಿಸಿ, ಶಾಲಾ ಆಡಳಿತದ ಜೊತೆ ಸಭೆ ನಡೆಸಬೇಕು. ಡೆಂಗ್ಯೂ ಸಂಕೀರ್ಣ ಸ್ಥಿತಿ ತಲುಪಿದರೆ ಅದಕ್ಕೆ ಚಿಕಿತ್ಸೆ ಇಲ್ಲ ಎಂದು ಅವರು ಸರ್ಕಾರದ ಗಮನ ಸೆಳೆದರು.
ರಕ್ತ ಪರೀಕ್ಷೆ, ಡೆಂಗ್ಯೂ ಪರೀಕ್ಷೆಗೆ ನಿಯಮ ಮೀರಿ ದುಬಾರಿ ದರ ವಸೂಲಿ ಮಾಡುತ್ತಿದ್ದಾರೆಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು,ಸರ್ಕಾರವು ತಾನು ನಿಗದಿ ಮಾಡಿದ ದರಕ್ಕಿಂತ ಹೆಚ್ಚು ಹಣ ಪಡೆದರೆ ಅಂಥ ಆಸ್ಪತ್ರೆ, ಘಟಕಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಅಂತಹ ಲ್ಯಾಬೊರೇಟರಿಗಳನ್ನು ಮುಚ್ಚಬೇಕು ಎಂದು ಒತ್ತಾಯಿಸಿದರು.
ಕೆಲವು ದೇಶಗಳಲ್ಲಿ ಡೆಂಘೀ ನಿಯಂತ್ರಣಕ್ಕೆ ಲಸಿಕೆ ನೀಡಲಾಗುತ್ತಿದೆ. ಜೂನ್-ಜುಲೈನಲ್ಲಿ ಇದನ್ನು ನೀಡಿದರೆ ಸಾವಿನ ಸಾಧ್ಯತೆ, ತೀವ್ರ ನಿಗಾ ಘಟಕದ ಅವಶ್ಯಕತೆ ತಗ್ಗಲಿದೆ ಎಂದು ಹೇಳಿದರು. ಅಪೂರ್ಣವಾಗಿ ನಿಲ್ಲುವ ಫ್ಲೈಓವರ್, ಅಂಡರ್ ಪಾಸ್, ಅಗೆದ ರಸ್ತೆ, ಸೇತುವೆ ಮೊದಲಾದಗಳಲ್ಲಿ ಮಳೆ ಬಂದಾಗ ಅಲ್ಲೆಲ್ಲ ನೀರು ನಿಂತು ವಿಪರೀತ ಸೊಳ್ಳೆಗಳು ಉತ್ತಪತ್ತಿಯಾಗುತ್ತವೆ. ಹೀಗಾಗಿ ಸೊಳ್ಳೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.