ಬೆಳಗಾವಿ : ದಿನಾಂಕ: 21 – 02 – 2026 ಶನಿವಾರ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಐ,ಕ್ಯೂ, ಎ,ಸಿ ಹಾಗೂ ಕನ್ನಡ ಸಂಘದ ಅಡಿಯಲ್ಲಿ ವಿಶ್ವ ಮಾತೃಭಾಷಾ ದಿನಾಚರಣೆಯನ್ನು ಆಚರಿಸಲಾಯಿತು.
ಸಹಾಯಕ ಪ್ರಾಧ್ಯಾಪಕ ಡಾ. ಎಸ್. ವಿ . ವಾಲಿಶೆಟ್ಟಿ ವಿಶೇಷ ಉಪನ್ಯಾಸ ನೀಡಿ, ತಾಯಿ ಕಲಿಸುವ ಮೊಟ್ಟ ಮೊದಲ ಭಾಷೆ ಮಾತೃಭಾಷೆ. ಮಾತೃಭಾಷೆ ಮಾತನಾಡುವಾಗ ಅಂತರಂಗದ ಭಾವಗಳು ಹೊರ ಹೊಮ್ಮುತ್ತವೆ. ಶಿಕ್ಷಕರು ಹೆಚ್ಚು ಭಾಷೆಗಳನ್ನು ಮಾತನಾಡುವುದನ್ನು ಕಲಿಯುವುದು ಇಂದು ಬಹಳ ಅಗತ್ಯವಾಗಿದೆ. ಭಾಷೆ ನಮ್ಮ ಮೂಲ ಸಂಸ್ಕೃತಿಯ ಪ್ರತಿಬಿಂಬವಾಗಿದೆ ಎಂದು ಹೇಳಿದರು.
ಕಿತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕಿ ಡಾ.ಕವಿತಾ ಕುಲಕರ್ಣಿ ಮಾತನಾಡಿ, ನಾವು ನಮ್ಮ ಆಡು ಭಾಷೆಯಲ್ಲಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ನಮ್ಮ ಭಾಷೆ ನಮ್ಮ ಹೆಮ್ಮೆ, ವೃತ್ತಿಯ ಸಲುವಾಗಿ ಬೇರೆ ಭಾಷೆ ಕಲಿತರೂ ನಮ್ಮತನ ಉಳಿದುಕೊಳ್ಳುವುದು ನಮ್ಮ ತಾಯಿಭಾಷೆಯಿಂದ ಮಾತ್ರ ಸಾಧ್ಯವೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಹಾಂತೇಶ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನಿರ್ಮಲಾ ಜಿ ಬಟ್ಟಲ ಮಾತನಾಡಿ,
ಭಾಷೆ ನಮ್ಮ ಅಸ್ಮಿತೆ, ಭಾಷೆ ಉಳಿಸುವುದು , ಬೆಳೆಸುವುದು ನಮ್ಮ ಕರ್ತವ್ಯವಾಗಿದೆ. ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ, ಅದು ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದುವರಿಸುವ ಮಾಧ್ಯಮ ಮತ್ತು ನಮ್ಮ ಆಲೋಚನೆಗಳು , ಗ್ರಹಿಕೆಗಳು ಪ್ರಖರವಾಗಿ ಪ್ರಕಟಗೊಳ್ಳುವುದು ತಾಯಿ ಭಾಷೆಯಿಂದ ಮಾತ್ರ ಸಾಧ್ಯ, ಕನ್ನಡ ನಮ್ಮ ಅಂತರಂಗದ ಕನ್ನಡಿ , ಕನ್ನಡ ಭಾಷೆಯನ್ನು ಪ್ರೀತಿಸಬೇಕು ಹಾಗೂ ಪ್ರಾಯೋಗಿಕವಾಗಿ ಬಳಸಬೇಕು,ಬೆಳೆಸಬೇಕೆಂದು ಕರೆ ನೀಡಿದರು.
ಪ್ರಶಿಕ್ಷಣಾರ್ಥಿಗಳಾದ ವೀಣಾ ಹಿರೇಮಠ, ಅಶ್ವಿನಿ ಹಾಲಗಿ ಮರ್ಡಿವಿಶ್ವ ಮಾತೃಭಾಷೆ ದಿನಾಚರಣೆಯ ಕುರಿತು ಕನ್ನಡದಲ್ಲಿ ಕುಮಾರ ರಾಠೋಡ ಲಂಬಾಣಿ ಭಾಷೆಯಲ್ಲಿ, ಪ್ರಾಂಜಲ ಧಾಮಣೆಕರ ಮರಾಠಿಯಲ್ಲಿ ಮತ್ತು ಆಶಿಯಾ ಉರ್ದು ಭಾಷೆಯಲ್ಲಿ ಮಾತನಾಡಿ ಮಾತೃಭಾಷೆಗಳಲ್ಲಿ ಮಾತನಾಡಿ ಅಭಿಮಾನ ವ್ಯಕ್ತಪಡಿಸಿದರು.
ಮಹಾವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿ , ಪ್ರಥಮ ಹಾಗೂ ತೃತೀಯ ಸೆಮಿಸ್ಟರ್ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿ ಲಕ್ಷ್ಮಿ ಹುಬ್ಬಳ್ಳಿ ಪ್ರಾರ್ಥಿಸಿದರು, ಪ್ರೊ. ರೂಪಾ ಅಕ್ಕಿ ಸ್ವಾಗತಿಸಿದರು, ಪ್ರೊ.ಸೋನಲ ಚಿನಿವಾಲ ವಂದಿಸಿದರು, ಪ್ರೊ. ಮಂಜುನಾಥ ಕಲಾಲ ನಿರೂಪಿಸಿದರು.


