ಬೈಲಹೊಂಗಲ: ಬೆಳಗಾವಿ ಜಿಲ್ಲಾ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ. ಬೆಳಗಾವಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳೆಲ್ಲವೂ ಕಾಂಗ್ರೆಸ್ ಕಾಲದಲ್ಲಿಯೇ ಆಗಿದ್ದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಜಗದೀಶ್ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿದರು.
ಬೆಳಗಾವಿ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಏನು ಎಂದು ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಬೆಳಗಾವಿ ಅಭಿವೃದ್ಧಿಗೆ ಬಿಜೆಪಿಯವರ ಕೊಡುಗೆ ಏನೆಂದು ಮೊದಲು ಶೆಟ್ಟರ್ ಅವರು ಹೇಳಲಿ ಎಂದು ಸವಾಲು ಹಾಕಿದರು.
ಬೈಲಹೊಂಗಲ ಬಾರ್ ಅಸೋಸಿಯೇಷನ್ ನಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಪರ ಮತಯಾಚಿಸಿದ ಸಚಿವರು, ಜಗದೀಶ್ ಶೆಟ್ಟರ್ ಅವಂತಹ ಅವಕಾಶವಾದಿ ರಾಜಕಾರಣಿ ನಮ್ಮ ಜಿಲ್ಲೆಗೆ ಬೇಕಾ ಎಂದು ಪ್ರಶ್ನಿಸಿದರು.
ಬೆಳಗಾವಿ ಜಿಲ್ಲೆಗೆ ಕಾಂಗ್ರೆಸ್ ಕೊಡುಗೆ ಏನು ಅಂತ ಶೆಟ್ಟರ್ ಕೇಳಿದ್ದಾರೆ? ಜಿಲ್ಲೆಗೆ ಅಣೆಕಟ್ಟು, ಶಾಲೆಗಳು, ಆಸ್ಪತ್ರೆಗಳು, ಬಿಮ್ಸ್, ಅನೇಕ ಕಾಲೇಜುಗಳನ್ನು ಕಟ್ಟಿದ್ದು ಕಾಂಗ್ರೆಸ್ ಕಾಲದಲ್ಲಿ. ನಾನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಯಾದ ಕೇವಲ 9 ತಿಂಗಳಲ್ಲಿ ಅಲ್ಲಿನ ಒಳಚರಂಡಿ ಸಮಸ್ಯೆಯನ್ನು ಇತ್ಯರ್ಥಪಡಿಸಿದೆ. ಒಳಚರಂಡಿ ವ್ಯವಸ್ಥೆಗಾಗಿ 320 ಕೋಟಿ ರೂಪಾಯಿ ಬಿಡುಗಡೆ ಮಾಡಿಸಿದೆ. ಉಡುಪಿ ಕೋರ್ಟ್ ಗೆ 11 ಕೋಟಿ ರೂ. ಬಿಡುಗಡೆ ಮಾಡಿಸಿದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆವರಣದಲ್ಲಿದ್ದ ಪಾರ್ಕಿಂಗ್ ಸಮಸ್ಯೆಯನ್ನು ಇತ್ಯರ್ಥಗೊಳಿಸಿದೆ. ಆದರೆ ಶೆಟ್ಟರ್ 2 ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಏನು ಮಾಡಿದ್ದಾರೆ. ಉಪಕಾರ ಮಾಡುವುದಿರಲಿ, ಇಲ್ಲಿಂದ ಯೋಜನೆಗಳನ್ನು ಒಯ್ಯುವ ಮೂಲಕ ಅನ್ಯಾಯ ಮಾಡಿದ್ದಾರೆ ಎಂದರು.
ನಾನು ಕನಸಿನಲ್ಲೂ ಎಣಿಸಿರಲಿಲ್ಲ, ಮೃಣಾಲ್ ಗೆ ಟಿಕೆಟ್ ಸಿಗುತ್ತೆ ಅಂತ. ಪಕ್ಷದ ಆಸೆಯಂತೆ ಮೃಣಾಲ್ ಗೆ ಟಿಕೆಟ್ ನೀಡಲಾಗಿದೆ. ನಾನು ಕೂಡ 2014ರ ಚುನಾವಣೆಯಲ್ಲಿ ನಿಂತು ಸೋತೆ. ಅಂದಿನ ಸೋಲನ್ನ ಇಂದು ಮೃಣಾಲ್ ಹೆಬ್ಬಾಳಕರ ಮೂಲಕ ಗೆಲ್ಲಬೇಕು ಎಂದು ಸಚಿವರು ಹೇಳಿದರು. ಆರು ಬಾರಿ ಶಾಸಕರಾಗಿ, ಮುಖ್ಯಮಂತ್ರಿ ಆಗಿ, ಎರಡು ಬಾರಿ ವಿರೋಧ ಪಕ್ಷದ ನಾಯಕರಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಶೆಟ್ಟರ್ ಇಂದು ಮೋದಿ ನೋಡಿ ಮತ ಹಾಕಿ ಅಂತಿದ್ದಾರೆ. ಸ್ವಸಾಮರ್ಥ್ಯ ಇಲ್ಲದ ವ್ಯಕ್ತಿ ನಮಗೆ ಬೇಕಾ ಎಂದು ಪ್ರಶ್ನಿಸಿದರು.
* *ಬೆಂಬಲ ಘೋಷಣೆ*
ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಅವರಿಗೆ ಮುಂಬರುವ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ಬೈಲಹೊಂಗಲ ಬಾರ್ ಅಸೋಸಿಯೇಷನ್ ವತಿಯಿಂದ ತೀರ್ಮಾನ ತೆಗೆದುಕೊಳ್ಳಲಾಯಿತು. ಈಗಾಗಲೇ ಗೋಕಾಕ್, ರಾಮದುರ್ಗ ಬಾರ್ ಅಸೋಸಿಯೇಷನ್ ವತಿಯಿಂದ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಿಸಲಾಗಿದೆ. ಈ ವೇಳೆ ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ ಮಾತನಾಡಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ಆರ್. ಮೆಳವಂಕಿ, ಉಪಾಧ್ಯಕ್ಷ ಎ.ಎಂ.ಶಿದ್ರಾಮನಿ, ಪ್ರಧಾನ ಕಾರ್ಯದರ್ಶಿ ವಿ.ಜಿ.ಕಟದಾಳ, ಸಹ ಕಾರ್ಯದರ್ಶಿ ವಿ.ಪಿ.ಪೂಜೇರಿ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಮಹಾಂತೇಶ್ ಅಣ್ಣ ಮತ್ತಿಕೊಪ್ಪ, ಶ್ರೀಶೈಲ್ ಅಬ್ಬಾಯಿ, ಬಸವರಾಜ್ ಕೌಜಲಗಿ, ರಮೇಶ್ ಕೋಲ್ಕರ್, ಪ್ರೇಮಾ ಬಿ ಬಡಿಗೇರ, ಭಾಗ್ಯಶ್ರೀ ಸೇರಿದಂತೆ ಹಲವು ವಕೀಲರು ಉಪಸ್ಥಿತರಿದ್ದರು.