ಫಂಡರಪುರ:ಸಂಗೋಲಾ ಮತ್ತು ಫಂಡರಪುರ ನಡುವೆ ಕೊಲ್ಲಾಪುರ ನಾಗಪುರ(11404)ಎಕ್ಸಪ್ರೆಸ್ ಟ್ರೇನಿಗೆ ಸಿಲುಕಿ ಸುಮಾರು 40ಕ್ಕೂ ಹೆಚ್ಚು ಕುರಿಗಳು ಅಸುನೀಗಿದ ಘಟನೆ ಸೋಮವಾರ ಸಂಜೆ 4:45ರ ಸುಮಾರಿಗೆ ನಡೆದಿದೆ. ಹಳಿ ದಾಟುತ್ತಿದ್ದ ಕುರಿಗಳ ಹಿಂಡಿಗೆ ರೈಲು ರಭಸದಿಂದ ಢಿಕ್ಕಿ ಹೊಡೆದ ಪರಿಣಾಮ ಕುರಿಗಳು ಹಳಿಯ ಎರಡೂ ಬದಿ ಚೆಲ್ಲಾಪಿಲ್ಲಿಯಾಗಿ ಬಿದ್ದರೆ, ಕೆಲವು ಟ್ರೇನ್ ಅಡಿ ಸಿಲುಕಿದ್ದವು. ಟ್ರೇನ್ 5-10ನಿಮಿಷ ನಿಂತು ಮತ್ತೆ ಸಾಗಿತು.
ಕುರಿಗಳ ಮಾಲೀಕನ ಗೋಳು ಮುಗಿಲುಮುಟ್ಟಿತ್ತು. ರೈಲಿನ ಪ್ರಯಾಣಿಕರು ತೀವ್ರ ಖೇದ ವ್ಯಕ್ತಪಡಿಸಿದರು. ಕೆಲ ಪ್ರಯಾಣಿಕರು ರೈಲು ಅಡಿ ಸಿಲುಕಿದ್ದ ಕುರಿಗಳನ್ನು ಹೊರತೆಗೆಯಲು ಸಹಾಯ ಮಾಡಿದರು. ಕುರಿಗಳನ್ನು ದೂರದಿಂದ ವೀಕ್ಷಿಸಿದ ರೈಲು ಚಾಲಕ ತುರ್ತು ಬ್ರೇಕ್ ಹಾಕಲು ಯತ್ನಿಸಿದರು, ಕುರಿಗಳ ರಕ್ಷಣೆ ಸಾಧ್ಯವಾಗಲಿಲ್ಲ. ಕುರಿಗಾರನಿಗೆ ಲಕ್ಷಾಂತರ ಹಾನಿಯಾಗಿರುವುದು ಖೇದ ಉಂಟು ಮಾಡಿದೆ.