ನವದೆಹಲಿ: ಮುಂದಿನ ನಾಲೈದು ದಿನಗಳಲ್ಲಿ ನೈಋತ್ಯ ಮಾನ್ಸೂನ್ ಕೇರಳಕ್ಕೆ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ತಿಳಿಸಿದೆ.
ಮೇ 27ರ ವೇಳೆಗೆ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಈ ಹಿಂದೆಯೇ ಮುನ್ಸೂಚನೆ ನೀಡಿತ್ತು.
ಸಾಮಾನ್ಯವಾಗಿ ನೈಋತ್ಯ ಮಾನ್ಸೂನ್ ಜೂನ್ 1ರ ವೇಳೆಗೆ ಕೇರಳಕ್ಕೆ ಪ್ರವೇಶಿಸುತ್ತದೆ. ಒಂದು ವೇಳೆ ನಿರೀಕ್ಷೆಯಂತೆ ಈ ಬಾರಿ ನಾಲೈದು ದಿನಗಳಲ್ಲಿ ಮುಂಗಾರು ಪ್ರವೇಶಿಸಿದರೆ, 2009ರ ನಂತರ ಭಾರತದ ಮುಖ್ಯ ಭೂಭಾಗದಲ್ಲಿ ವಾಡಿಕೆಗಿಂತ ಮುಂಚಿತವಾಗಿ ಮುಂಗಾರು ಆರಂಭವಾಗುತ್ತಿರುವುದು ಇದೇ ಮೊದಲು ಎಂದು ಹವಾಮಾನ ಇಲಾಖೆ ತಿಳಿಸಿದೆ. (2009ರಲ್ಲಿ ಮೇ 23ರಂದು ಮುಂಗಾರು ಪ್ರವೇಶಿಸಿತ್ತು)
ಸಾಮಾನ್ಯವಾಗಿ, ನೈಋತ್ಯ ಮಾನ್ಸೂನ್ ಜುಲೈ 8ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ. ಸೆಪ್ಟೆಂಬರ್ 17ರ ಸುಮಾರಿಗೆ ಇದು ವಾಯವ್ಯ ಭಾರತದಿಂದ ಸ್ಥಳಾಂತರಗೊಳ್ಳಲು ಪ್ರಾರಂಭಿಸುತ್ತದೆ. ಅಕ್ಟೋಬರ್ 15ರ ಹೊತ್ತಿಗೆ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ.
ಕಳೆದ ವರ್ಷ ಮೇ 30ರಂದು, 2023ರಲ್ಲಿ ಜೂನ್ 8, 2022 ರಲ್ಲಿ ಮೇ 29, 2021 ರಲ್ಲಿ ಜೂನ್ 3, 2020ರಲ್ಲಿ ಜೂನ್ 1, 2019 ರಲ್ಲಿ ಜೂನ್ 8 ಮತ್ತು 2018 ರಲ್ಲಿ ಮೇ 29 ರಂದು ಮಾನ್ಸೂನ್ ಕೇರಳಕ್ಕೆ ಪ್ರವೇಶಿಸಿತ್ತು.