ಬೆಂಗಳೂರು :
ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ
ಚಂಡಮಾರುತ ರೂಪ. ‘ಬಿಪರ್ಜಾಯ್’ (ವಿಪತ್ತು) ಎಂಬ ಹೆಸರು
ನಿನ್ನೆಯಿಂದಲೇ ಕರ್ನಾಟಕದ ಸಮುದ್ರ ತೀರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ
ಇಂದಿನಿಂದ 4 ರಾಜ್ಯಗಳ ಕರಾವಳಿಯಲ್ಲಿ ಭಾರಿ ಮಳೆಯ ಸಾಧ್ಯತೆ ಇದೆ. ಸಮುದ್ರದಿಂದ ಹಿಂತಿರುಗುವಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.
ಚಂಡಮಾರುತದಿಂದ ಮುಂಗಾರು ಆಗಮನ ಮತ್ತಷ್ಟು ತಡ ಸಂಭವ ಇದೆ.
ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಇದೀಗ ಚಂಡಮಾರುತದ ರೂಪ ತಾಳಿದೆ. ‘ಬಿಪರ್ಜಾಯ್’ (ವಿಪತ್ತು) ಹೆಸರಿನ ಚಂಡಮಾರುತ ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭಿಸಿದ್ದು, ಕರ್ನಾಟಕ ಕರಾವಳಿ ಪ್ರಕ್ಷುಬ್ಧವಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ ಹಾಗೂ ಗುಜರಾತ್ ಕರಾವಳಿಗಳಲ್ಲಿ 3 ದಿನ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದೇ ಚಂಡಮಾರುತವು ಮುಂಗಾರು ಆಗಮನಕ್ಕೆ ಅಡ್ಡಿ ಮಾಡಿದೆ. ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ, ಮುಂಗಾರು ಜೂ.8 ಅಥವಾ 9ರಂದು ಕೇರಳ ಪ್ರವೇಶಿಸಬಹುದು. ಆದರೆ ಅದು ಪ್ರಬಲ ರೂಪದಲ್ಲಿರದೇ ದುರ್ಬಲವಾಗಿರಲಿದೆ ಎಂದು ಹೇಳಲಾಗಿದೆ.
ಈ ಚಂಡಮಾರುತಕ್ಕೆ ಬಂಗಾಳಿ ಭಾಷೆಯ ಬಿಪರ್ಜಾಯ್ (ವಿಪತ್ತು) ಎಂದು ಹೆಸರಿಡಲಾಗಿದ್ದು, ಬಾಂಗ್ಲಾದೇಶ ಈ ಹೆಸರನ್ನು ಸೂಚಿಸಿದೆ. ಈ ಚಂಡಮಾರುತ ಪ್ರಭಾವದಿಂದಾಗಿ ಭಾರತದ ಪಶ್ಚಿಮ ಕರಾವಳಿಯಲ್ಲಿ ಮಳೆಯಾಗಲಿದೆ. ಈ ಚಂಡಮಾರುತ ಪಶ್ಚಿಮ ಘಟ್ಟವನ್ನು ದಾಟುವಷ್ಟುಪ್ರಬಲವಾಗಿ ಭಾರತದತ್ತ ಬೀಸುವುದಿಲ್ಲ ಎಂದು ಇಲಾಖೆ ಹೇಳಿದೆ.
ಈ ಚಂಡಮಾರುತ ಗೋವಾದಿಂದ ನೈಋುತ್ಯ ಭಾಗಕ್ಕೆ 950 ಕಿ.ಮೀ., ಮುಂಬೈನಿಂದ 1,100 ಕಿ.ಮೀ. ಮತ್ತು ಪೋರಬಂದರಿನಿಂದ 1,490 ಕಿ.ಮೀ. ದೂರದಲ್ಲಿ ಸೃಷ್ಟಿಯಾಗಿದೆ. ಈ ಚಂಡಮಾರುತ ಉತ್ತರಾಭಿಮುಖವಾಗಿ ಚಲಿಸುತ್ತಿದ್ದು, ಜೂ.8ರಂದು ಗೋವಾ, ಮಹಾರಾಷ್ಟ್ರ ಸಮುದ್ರ ತೀರಗಳಲ್ಲಿ ಪ್ರಕ್ಷುಬ್ಧ ವಾತಾವರಣ ಇರಲಿದೆ ಎಂದು ಇಲಾಖೆ ಹೇಳಿದೆ. ವಾಯುಭಾರ ಕುಸಿತದಿಂದಾಗಿ ಮಂಗಳವಾರ ಕರ್ನಾಟಕದ ಕರಾವಳಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದ್ದು, ಮೀನುಗಾರರಿಗೆ ದಡಕ್ಕೆ ಮರಳುವಂತೆ ಎಚ್ಚರಿಕೆ ನೀಡಲಾಗಿದೆ. ಈ ಚಂಡಮಾರುತ ಗುರುವಾರದ ಹೊತ್ತಿಗೆ ಮತ್ತಷ್ಟುತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಆದರೆ, ಈ ಚಂಡಮಾರುತ ವಾಯವ್ಯ ದಿಕ್ಕಿನತ್ತಲೂ ಚಲಿಸುವ ಸಾಧ್ಯತೆಗಳು ದಟ್ಟವಾಗಿರುವುದರಿಂದ ಭಾರತದ ಯಾವ ತೀರಕ್ಕೆ ಅಪ್ಪಳಿಸಬಹುದು ಎಂದು ಸ್ಪಷ್ಟಪಡಿಸಿಲ್ಲ. ಮುಂಗಾರು ಮಾರುತ ವಿಳಂಬವಾಗಲು ಈ ಚಂಡಮಾರುತವೂ ಕಾರಣವಾಗಿದ್ದು, ಈ ಮೊದಲು ಹವಾಮಾನ ಇಲಾಖೆ ಅಂದಾಜಿಸಿದಂತೆ ಜೂ.3ರಂದೇ ಆಗಮಿಸಬೇಕಿತ್ತು. ಇದೀಗ ಮುಂಗಾರು ಮತ್ತಷ್ಟುವಿಳಂಬವಾಗಲಿದೆ ಎಂದು ಹೇಳಲಾಗುತ್ತಿದ್ದು, ನಿಖರ ದಿನಾಂಕವನ್ನು ಹವಾಮಾನ ಇಲಾಖೆ ಸ್ಪಷ್ಟವಾಗಿ ಹೇಳಿಲ್ಲ.