ನವದೆಹಲಿ: ದೇಶದ ಕೃಷಿ ಚಟುವಟಿಕೆ ಮತ್ತು ಆರ್ಥಿಕತೆಯ ಜೀವನಾಡಿಯಾಗಿರುವ ಮುಂಗಾರು ಮಾರುತಗಳು ಗುರುವಾರ ದೇಶದ ದಕ್ಷಿಣದ ತುತ್ತತುದಿಯ ರಾಜ್ಯವಾದ ಕೇರಳದ ಕರಾವಳಿ ಮತ್ತು ಈಶಾನ್ಯ ರಾಜ್ಯವನ್ನು ಪ್ರವೇಶಿಸಿದೆ.
ಜೂನ್ – ಸೆಪ್ಟೆಂಬರ್ ಅವಧಿಯಲ್ಲಿ ದೇಶದಲ್ಲಿ ಮಳೆ ಸುರಿಸುವ ಮುಂಗಾರು ಮಾರುತಗಳ ಈ ಬಾರಿ ದೀರ್ಘಕಾಲೀನ ಸರಾಸರಿಗಿಂತ ಹೆಚ್ಚಿ ಮಳೆ ಸುರಿಸಬಹುದು ಎಂದು ಕಳೆದ ತಿಂಗಳು ಹವಾಮಾನ ಇಲಾಖೆ ಶುಭ ಸುದ್ದಿ ನೀಡಿತ್ತು.
ನೈಋತ್ಯ ಮಾನ್ಸೂನ್ ಭಾರತಕ್ಕೆ ಪ್ರಮುಖ ಮಳೆಯನ್ನು ತರುವ ಕಾಲ. ಇದು ದೇಶದ ವಾರ್ಷಿಕ ಮಳೆಯ ಬಹುಪಾಲನ್ನು ಒದಗಿಸುತ್ತದೆ. ಈ ಅವಧಿಯಲ್ಲಿ ಖಾರೀಫ್ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ಜೂನ್ ಮತ್ತು ಜುಲೈ ತಿಂಗಳ ಅವಧಿಯ ನೈಋತ್ಯ ಮಾನ್ಸೂನ್ ಅತಿ ಮಹತ್ವದ್ದು ಅಂತಲೇ ಪರಿಗಣಿಸಲಾಗುತ್ತದೆ. ನೈಋತ್ಯದಿಂದ ಬೀಸುವ ಮಾನ್ಸೂನ್ ಸಾಮಾನ್ಯವಾಗಿ ಜೂನ್ನಲ್ಲಿ ಆರಂಭವಾಗಿ ಸೆಪ್ಟಂಬರ್ ನಲ್ಲಿ ಕೊನೆಗೊಳ್ಳುತ್ತದೆ.
ಸಾಮಾನ್ಯವಾಗಿ ಮುಂಗಾರು ಮೇ 31- ಜೂ.1ರ ವೇಳೆಗೆ ಕೇರಳ ಪ್ರವೇಶಿಸಲಿದೆ. ಬಳಿಕ ಮುಂದಿನ 5-10 ದಿನಗಳಲ್ಲಿ ದೇಶಾದ್ಯಂತ ವ್ಯಾಪಿಸುವ ನಿರೀಕ್ಷೆಯಿದೆ. ರೆಮಲ್ ಚಂಡಮಾರುತ ಬಂದ ಹಿನ್ನೆಲೆಯಲ್ಲಿ ಈಶಾನ್ಯ ಭಾರತದಲ್ಲೂ ಮುಂಗಾರು ಪ್ರವೇಶಿಸಲಿದೆ ಎಂದು ಹೇಳಿದೆ.
ಮುಂಗಾರು ಪೂರ್ವ ಮಳೆಯಿಂದಾಗಿ ಭಾರತದ ಬಹುತೇಕ ಕಡೆ ಮೇ ತಿಂಗಳಲ್ಲಿ ಅತಿವೃಷ್ಟಿಯಾಗಿದ್ದು, ಅಗತ್ಯಕ್ಕಿಂತ ಹೆಚ್ಚು ಮಳೆಯಾಗಿದೆ. ಅದರಲ್ಲೂ ಕೇರಳ ದಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು, 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.