ಢಾಕಾ/ನವದೆಹಲಿ: ರಾಜಕೀಯ ಪಕ್ಷಗಳು ಒಮ್ಮತಕ್ಕೆ ಬರಲು ವಿಫಲವಾದ ಕಾರಣ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರು ರಾಜೀನಾಮೆ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಯೂನಸ್ ಅವರು ರಾಜೀನಾಮೆ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳೇ ರೂಪಿಸಿರುವ ನ್ಯಾಷನಲ್ ಸಿಟಿಜನ್ ಪಾರ್ಟಿ (ಎನ್ಸಿಪಿ) ಸಂಚಾಲಕ ನಹಿದ್ ಇಸ್ಲಾಂ ತಿಳಿಸಿರುವುದಾಗಿ ಬಿಬಿಸಿ ಬಾಂಗ್ಲಾ ವರದಿ ಮಾಡಿದೆ.
‘ಇಂದು ಬೆಳಿಗ್ಗೆಯಿಂದ ಮೊಹಮ್ಮದ್ ಯೂನಸ್ ಅವರ ರಾಜೀನಾಮೆ ಸುದ್ದಿ ಕೇಳಿ ಬರುತ್ತಿದೆ. ಇದೇ ವಿಚಾರದ ಬಗ್ಗೆ ಚರ್ಚಿಸಲು ನಾನು ಅವರನ್ನು ಭೇಟಿ ಮಾಡಿದ್ದೆ. ಸದ್ಯದ ಪರಿಸ್ಥಿತಿಗೆ ಅಧರಿಸಿ ರಾಜೀನಾಮೆ ನೀಡಲು ಚಿಂತನೆ ನಡೆಸುತ್ತಿರುವುದಾಗಿ ಅವರು ಹೇಳಿದರು’ ಎಂದು ನಹಿದ್ ಇಸ್ಲಾಂ ತಿಳಿಸಿದ್ದಾರೆ.
ದೇಶದ ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷಗಳು ಒಮ್ಮತಕ್ಕೆ ಬರದ ಹೊರತು ನಾನು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ಯೂನಸ್ ತಿಳಿಸಿರುವುದಾಗಿ ಎನ್ಸಿಪಿ ಸಂಚಾಲಕ ಹೇಳಿದರು.