ಯಾದಗಿರಿ :
ಕಲ್ಯಾಣ ಕರ್ನಾಟಕಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಭಿವೃದ್ಧಿ ಮಂತ್ರ ಜಪಿಸಿದ್ದಾರೆ. ಯಾದಗಿರಿಯಲ್ಲಿ ಮೋದಿ ಹವಾ ಇಂದು ಕಳೆಗಟ್ಟಿದೆ. ನಾನಾ ಯೋಜನೆಗಳಿಗೆ ಚಾಲನೆ ನೀಡಿದ ಅವರು ತಮ್ಮ ಭಾಷಣದ ಉದ್ದಕ್ಕೂ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಮನೆ ಮನೆಗೆ ಕುಡಿಯುವ ನೀರು, ರೈತರ ಅಭಿವೃದ್ಧಿ, ಅಪೌಷ್ಟಿಕತೆ ನಿವಾರಣೆ, ಮೂಲಭೂತ ಸೌಕರ್ಯ ಹೆಚ್ಚಿಸುವ ಕುರಿತು ಮಾತನಾಡಿದ್ದಾರೆ.
ವೋಟ್ ಬ್ಯಾಂಕ್ ರಾಜಕಾರಣದಿಂದ ಈ ಭಾಗದ ಜಿಲ್ಲೆಗಳ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸಿದರು. ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕಕ್ಕೆ ಹಲವು ಡಬಲ್ ಉಪಯೋಗ ದೊರೆಯುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರದ ಆಡಳಿತದಿಂದ ಅಭಿವೃದ್ಧಿ ಯೋಜನೆ ಯಶಸ್ವಿಯಾಗಿವೆ. ಇದಕ್ಕೆ ಜಲಜೀವನ್ ಯೋಜನೆ ಅತ್ಯುತ್ತಮ ಉದಾಹರಣೆ. ನಮ್ಮ ಸರಕಾರದಿಂದ ಅನೇಕ ಕಾರಿಡಾರ್ ಯೋಜನೆಗಳ ಲಾಭ ದೊರೆಯುತ್ತಿದೆ ಎಂದು ಹೇಳಿದರು.
ಸುರಪುರ ರಾಜ ವೆಂಕಟಪ್ಪ ನಾಯಕರನ್ನು ಮೋದಿ ನೆನಪಿಸಿಕೊಂಡರು. ಕರ್ನಾಟಕದ ಎಲ್ಲಾ ಸಹೋದರ ಸಹೋದರಿಯರಿಗೆ ನನ್ನ ವಂದನೆಗಳು ಎಂಬ ಮೂಲಕ ಕನ್ನಡದಲ್ಲಿ ಭಾಷಣ ಆರಂಭಿಸಿದಾಗ ಕಾರ್ಯಕರ್ತರ ಜಯ ಘೋಷ ಮುಗಿಲುಮುಟ್ಟಿತು.