ಬೆಳಗಾವಿ: ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ತಾಲೂಕಿನ ಮೋದಗಾ ಗ್ರಾಮ ಪಂಚಾಯತ್ ಚುನಾವಣೆ ಮೋದಗಾ ಹಾಗೂ ಹೊನ್ನಿಹಾಳ ಗ್ರಾಮದ ಹಿರಿಯ ಮಾರ್ಗದರ್ಶನದಲ್ಲಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ರೇಖಾ ಸುರೇಶ ಕಟಬುಗೋಳ ಹಾಗೂ ಉಪಾಧ್ಯಕ್ಷರಾಗಿ ವಿಜಯಲಕ್ಷ್ಮೀ ರಾಜು ತಳವಾರ ಆಯ್ಕೆಯಾದರು.
19 ಸದಸ್ಯ ಬಲದ ಗ್ರಾಪಂ ಪಂಚಾಯತ್ನಲ್ಲಿ ಗುರುವಾರ ನಡೆದ ಚುನಾವಣೆ ಅತ್ಯಂತ ಬಿರುಸಿನಿಂದ ಕೂಡಿತ್ತು. ಯಾರು ಆಯ್ಕೆ ಆಗಲಿದ್ದಾರೆ ಎಂಬುದು ಕೊನೆಯವರೆಗೂ ಗೊತ್ತಾಗಲಿಲ್ಲ. ಒಟ್ಟು ಮೂವರು ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದರು.
ಹೊನ್ನಿಹಾಳ ಗ್ರಾಮದ ರೇಖಾ ಕಟಬುಗೋಳ 10 ಮತ ಪಡೆದು ಜಯಭೇರಿ ಬಾರಿಸಿದರು. ಪ್ರತಿಸ್ಪರ್ಧಿ 6 ಮತ ಪಡೆದರೆ, ಮತ್ತೊಬ್ಬರು 2 ಮತ ಪಡೆದು ಪರಾಭವಗೊಂಡರು. ಒಂದುಮತ ಅಸಿಂಧು ಆಗಿದೆ. ಉಪಾಧ್ಯಕ್ಷರಾಗಿ ವಿಜಯಲಕ್ಷ್ಮೀ ಅವಿರೋಧವಾಗಿ ಆಯ್ಕೆಯಾದರು. ತೀವ್ರ ಜಿದ್ದಿಜಿದ್ದಿಗೆ ಈ ಚುನಾವಣೆ ಕಾರಣವಾಗಿತ್ತು.
ಗೆಲುವು ಸಾಧಿಸುತ್ತಿದ್ದಂತೆ ಅಧ್ಯಕ್ಷೆ ರೇಖಾ ಕಟಬುಗೋಳ ಮೋದಗಾ ಗ್ರಾಮದ ಸಿದ್ದೇಶ್ವರ ದೇವಸ್ಥಾನ ಹಾಗೂ ಹೊನ್ನಿಹಾಳ ಗ್ರಾಮದ ಶ್ರೀ ಬೀರಪ್ಪ, ವಿಠ್ಠಲನ ದರ್ಶನ ಪಡೆದರು. ಬಳಿಕ ಮಾತನಾಡಿದ ರೇಖಾ, ನಮ್ಮ ಮತದಾರರ ಆಶೀರ್ವಾದದಿಂದ ಗೆಲುವು ಸಾಧಿಸಿದ್ದೇನೆ. ಮೋದಗಾ ಹಾಗೂ ಹೊನ್ನಿಹಾಳ ಗ್ರಾಮದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಎಲ್ಲರೂ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಹಕಾರ ನೀಡಬೇಕು ಎಂದರು.
ಗ್ರಾಪಂ ಸದಸ್ಯರಾದ ವಿಜಯ ಜಾಧವ, ಶಹಾಜಿ ಜಾಧವ, ಶಿವಾನಂದ ಮಠದ, ಪ್ರಕಾಶ ಕಡ್ಯಾಗೋಳ, ಪ್ರಕಾಶ ದಾನೋಜಿ, ಮಾರುತಿ ಮುಗಳಿ, ಸಾಗರ ಹಣಬರ, ರಾಜು ತಳವಾರ, ಬಾಳು ಬಳ್ಳೊಡಿ, ಕಾಂಚನ ನಾಯಕ, ಮುಖಂಡರಾದ ತೌಸೀಫ ಫಣಿಬಂಧ, ಸುರೇಶ ಕಟಬುಗೋಳ, ಮೀರಾ ಮುಲ್ಲಾ, ಇಬ್ರಾಹಿಂ ಸಂಗತ್ರಾಸ, ಮೈನೂಬಾಯಿ ಅಗಸಿಮನಿ, ಸುಮಂತ ಪಾಟೀಲ ಸೇರಿದಂತೆ ಮೋದಗಾ, ಹೊನ್ನಿಹಾಳ ಗ್ರಾಮದ ಹಿರಿಯರು ಇದ್ದರು.