ಬೆಳಗಾವಿ :
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಿರುವ ರಾಜ್ಯದ ಬಜೆಟ್ “ಚುನಾವಣೆ ದೃಷ್ಟಿಯಿಂದ ಹೆಣೆಯಲಾದ ತಳಬುಡವಿಲ್ಲದ ಬಜೆಟ್” ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಜಂಟಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಬಜೆಟ್ ನಲ್ಲಿ ನಿರುದ್ಯೋಗ ನಿವಾರಣೆಗೆ ಯಾವ ಕ್ರಮವೂ ಇಲ್ಲ. ತಾಂಡವಾಡುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಹ ಯಾವುದೇ ಕ್ರಮಗಳಿಲ್ಲ. ಈ ಬಜೆಟ್ ನಲ್ಲಿ ಎಲ್ಲರ ಮೂಗಿಗೆ ಬರಿ ತುಪ್ಪ ಸವರುವ ಕೆಲಸವಾಗಿದೆ ಎಂದು ಲೆವಡಿ ಮಾಡಿದ್ದಾರೆ.
“ಈ ಬಜೆಟ್ ನಿಂದ ಕೆಳ ಅಥವಾ ಮಧ್ಯಮ ವರ್ಗದವರಿಗೆ ಯಾವುದೇ ಪ್ರಯೋಜನವಿಲ್ಲ ಎಂಎಸ್ಎಂಇಗಳನ್ನು ಸ್ಥಾಪಿಸುವ ಅಥವಾ ಉದ್ಯೋಗ ಸೃಷ್ಟಿಸುವ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಿಸುವ ಕ್ರಮಗಳ ಬಗ್ಗೆ ಯಾವುದೇ ಉಲ್ಲೇಖವೇ ಇಲ್ಲದಿರುವುದು ಆಶ್ಚರ್ಯಕರ” ಎಂದು ಅವರು ಹೇಳಿದರು.
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಂತಹ ಪ್ರಾಥಮಿಕ ಕ್ಷೇತ್ರಗಳಿಗೆ ಬಜೆಟ್ ನಲ್ಲಿ ಯಾವುದೇ ಪ್ರಾಮುಖ್ಯತೆಯನ್ನು ನೀಡಿಲ್ಲ. ಹೆಚ್ಚಿನ ಹೊಸ ಯೋಜನೆಗಳನ್ನು ಘೋಷಿಸುವುದಕ್ಕಿಂತ ಹಳೆಯ ಯೋಜನೆಗಳಿಗೆ ಹೊಳಪು ನೀಡುವ ಕೆಲಸ ಈ ಬಜೆಟ್ ನಿಂದಾಗಿದೆ. ರೈತರ ಕಲ್ಯಾಣ ಅಥವಾ ಅಭಿವೃದ್ಧಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ಈ ಬಜೆಟ್ ನೀಡಿಲ್ಲ ಎಂದು ಲಕ್ಷ್ಮೀ ಹೆಬ್ಬಾಳಕರ ಹಾಗೂ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.
ಒಟ್ಟಾರೆಯಾಗಿ ಬಜೆಟ್ ಹೆಸರಿನಲ್ಲಿ ಜನರ ಕಿವಿಗೆ ಹೂ ಮುಡಿಸುವ ಕೆಲಸವನ್ನು ಬಿಜೆಪಿ ಸರಕಾರ ಮಾಡಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.