ಖಾನಾಪುರ : ಖಾನಾಪುರ ಪಟ್ಟಣದಲ್ಲಿ ಸುಮಾರು 14 ಕೋಟಿ ರೂ. ರಸ್ತೆ ಕಾಮಗಾರಿಗಳ ಪ್ರಗತಿಯನ್ನು ಖುದ್ದಾಗಿ ಪರಿಶೀಲಿಸಲು ಶಾಸಕ ವಿಠಲರಾವ್ ಅಚ್ಚರಿಯ ಭೇಟಿ ನೀಡಿದರು.
ಜನಸಾಮಾನ್ಯರಿಗೆ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಕಾಳಜಿ ವಹಿಸಿರುವ ಶಾಸಕರು, ಕಾಮಗಾರಿಗಳ ಗುಣಮಟ್ಟ, ವೇಗ ಮತ್ತು ಸುರಕ್ಷತಾ ಕ್ರಮಗಳನ್ನು ಖಾತರಿಪಡಿಸಿಕೊಳ್ಳಲು ಈ ಭೇಟಿ ನೀಡಿದರು. ಅವರು ಕಾಮಗಾರಿ ಸ್ಥಳಗಳಲ್ಲಿ ಕೆಲಸದ ಪ್ರಗತಿಯನ್ನು ಗಮನಿಸಿ, ಕಾಮಗಾರಿಗಳು ನಿಗದಿತ ಸಮಯಕ್ಕೆ ಪೂರ್ಣಗೊಳ್ಳುವಂತೆ ಮತ್ತು ಗುಣಮಟ್ಟದಲ್ಲೂ ಯಾವುದೇ ರಾಜಿ ಆಗದಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕರು, ಸಾರ್ವಜನಿಕರಿಗೆ ಯಾವುದೇ ಅಡಚಣೆಯಾಗದಂತೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಮತ್ತು ರಾತ್ರಿ ವೇಳೆ ಕೆಲಸ ಮಾಡುವ ಕಾರ್ಮಿಕರ ಸುರಕ್ಷತೆ ಮತ್ತು ಸಂಚಾರ ನಿರ್ವಹಣೆಗೆ ಗಮನ ನೀಡಲು ಸೂಚಿಸಿದರು. ಖಾನಾಪುರ ಪಟ್ಟಣದ ಅಭಿವೃದ್ಧಿಗೆ ರಸ್ತೆ ಕಾಮಗಾರಿ ಅತ್ಯಗತ್ಯ ಎಂದು ಹೇಳಿದ ಅವರು, ಸುಗಮ ಸಂಚಾರ ಕಲ್ಪಿಸುವುದು ತಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು. ಶಾಸಕರ ಈ ಕ್ರಮವನ್ನು ನಾಗರಿಕರು ಪ್ರಶಂಸಿಸಿದ್ದು, ಮಧ್ಯರಾತ್ರಿಯಲ್ಲಿ ಕಾಮಗಾರಿಗಳನ್ನು ಪರಿಶೀಲಿಸಿದ ಅವರ ಜನಪರ ನಿಲುವನ್ನು ಸ್ವಾಗತಸಿದ್ದಾರೆ. ಈ ಸಂದರ್ಭದಲ್ಲಿ ಸಂಬಂಧಿತ ಇಂಜಿನಿಯರ್ಗಳು, ಗುತ್ತಿಗೆದಾರರು ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಂಡು ಖಾನಾಪುರ ಪಟ್ಟಣದ ಜನರಿಗೆ ಅನುಕೂಲವಾಗುವ ನಿರೀಕ್ಷೆಯಿದೆ.


