ಬೆಳಗಾವಿ ಉತ್ತರ ಮತಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಅವರು ಮಾತಿನಲ್ಲಿ ಶೂರರು. ಸಹನಾಶೀಲರು. ಆದರೆ, ಕೆಲಸದಲ್ಲಿ ಮಾತ್ರ ತೀರಾ ದುರ್ಬಲರು. ಇದರ ಪರಿಣಾಮ ಈ ಬಾರಿ ಅವರಿಗೆ ಮತ್ತೆ ಟಿಕೆಟ್ ನೀಡಿದರೆ ಸೋಲು ಕಟ್ಟಿಟ್ಟ ಬುತ್ತಿ ಎಂಬ ವಾತಾವರಣ ಕಂಡು ಬಂದಿದೆ. ನಾಗರಿಕ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿರುವ ಅನಿಲ್ ಬೆನಕೆ ಅವರ ವಿರುದ್ಧ ಜನಾಕ್ರೋಶ ಹೆಚ್ಚಿದೆ.
ಬೆಳಗಾವಿ : ಮೊದಲ ಬಾರಿ ಆಯ್ಕೆಯಾಗಿ ಬಂದಿರುವ ಅನಿಲ್ ಬೆನಕೆ ಅವರು ಮಾತಿನಲ್ಲಿ ಮೃದು. ಆದರೆ, ಕೆಲಸದಲ್ಲಿ ಮಾತ್ರ ಶೂನ್ಯ. ಇದು ಬೆಳಗಾವಿ ಮಹಾನಗರದಲ್ಲಿ ಕಂಡುಬರುವ ಸ್ಥಿತಿ. ಕಳೆದ ನಿರಾಯಾಸವಾಗಿ ಗೆದ್ದು ಬಂದಿದ್ದ ಅನಿಲ್ ಬೆನಕೆ ಅವರಿಗೆ ಈ ಬಾರಿ ಗೆಲುವು ಅತ್ಯಂತ ಕಠಿಣವಾಗಿದೆ.
ಅವರ ಕೆಲಸ ಕಾರ್ಯಗಳ ಬಗ್ಗೆ ಜನಸಾಮಾನ್ಯರಿಗೆ ತೀವ್ರ ಅಸಮಾಧಾನ ಇದೆ. ಇದರ ಪರಿಣಾಮ ಅವರಿಗೆ ಈ ಬಾರಿ ಟಿಕೆಟ್ ತಪ್ಪಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ವ್ಯತಿರಿಕ್ತವಾಗಿ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಶಾಸಕ ಲಕ್ಷ್ಮಿ ಹೆಬ್ಬಾಳಕರ್ ಸರಕಾರದ ಮಟ್ಟದಲ್ಲಿ ಏನು ಬೇಕು ಅಂತಹ ಯೋಜನೆಗಳನ್ನು, ಕೆಲಸ ಕಾರ್ಯಗಳನ್ನು ತಮ್ಮ ಮತಕ್ಷೇತ್ರಕ್ಕೆ ತರುತ್ತಿದ್ದಾರೆ. ಆದರೆ ಸ್ವಪಕ್ಷದ ಶಾಸಕರು ಮಾತ್ರ ಸಂಪೂರ್ಣ ವಿಫಲರಾಗಿದ್ದಾರೆ. ಎರಡನೇ ರಾಜಧಾನಿಯಾಗಿ ಬೆಳೆಯುತ್ತಿರುವ ಬೆಳಗಾವಿ ಮಹಾನಗರಕ್ಕೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಅನಿಲ್ ಬೆನಕೆಯವರು ಸಂಪೂರ್ಣ ವಿಫಲರಾಗಿದ್ದಾರೆ.
ಶಕ್ತಿಕೇಂದ್ರದ ಕೂಗಳತೆಯಲ್ಲೇ ಸಮಸ್ಯೆ ಅನಾವರಣ : ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಕೂಗಳತೆ ದೂರದಲ್ಲಿರುವ ಕಚೇರಿ ರಸ್ತೆ ಸಮಸ್ಯೆ. ಬಡಕಲ ಗಲ್ಲಿ ವರೆಗೆ ರಸ್ತೆಗೆ ಚರಂಡಿ ವ್ಯವಸ್ಥೆ ಇಲ್ಲ. ಎಲ್ಲವೂ ಮುಚ್ಚಿವೆ. ಇಲ್ಲಿಯ ನಾಗರಿಕರು ಈ ಬಗ್ಗೆ ಸಾಕಷ್ಟು ಸಲ ಶಾಸಕ ಅನಿಲ್ ಬೆನಕೆ ಅವರಿಗೆ ಮನವರಿಕೆ ಮಾಡಿದರೂ ಅವರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಬರಿಯ ನಾಮ ಕೆ ವಾಸ್ತೆ ಗುತ್ತಿಗೆದಾ್ರಿಗೆ ಹೇಳುತ್ತೇನೆ ನಿಮ್ಮ ನಂಬರ ಕೊಡಿ ಎಂದು ಮೂಗಿಗೆ ತುಪ್ಪ ಹಚ್ಚುವದಷ್ಟೇ ಇವರ ಕಾಯಕವಾಗಿದೆ. ‘ಜನಜೀವಾಳ ‘ ಕೂಡ ಜನರ ಪರವಾಗಿ ಮನವಿ ಮಾಡಿದೆ. ಇದರಿಂದ ಇಲ್ಲಿನ ನಾಗರಿಕರು ಈ ಬಾರಿ ಅನಿಲ್ ಬೆನಕೆ ಅವರ ವಿರುದ್ಧ ಸಮರ ಸಾರಿದ್ದಾರೆ. ಚುನಾವಣಾ ಕಾಲಕ್ಕೆ ಅವರಿಗೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಚರಂಡಿ ವ್ಯವಸ್ಥೆ ಮಾಡದೆ ಇರುವುದರಿಂದ ಮಳೆಗಾಲದಲ್ಲಂತೂ ಇಲ್ಲಿ ಸಂಚರಿಸುವುದು ದುಸ್ತರವಾಗಿದೆ. ರಸ್ತೆಯ ಮೇಲೆ ಹೊಲಸು ನೀರು ನುಗ್ಗುತ್ತದೆ. ಇಲ್ಲಿ ಸಂಚರಿಸುವ ಪಾದಚಾರಿಗಳ ಸ್ಥಿತಿಯಂತೂ ಹೇಳುತೀರದು. ಅತ್ಯಂತ ಶೋಚನೀಯ.
ಜಿಲ್ಲಾಧಿಕಾರಿ ಕಚೇರಿಗೆ ತೀರಾ ಸಮೀಪದಲ್ಲಿರುವ ಈ ರಸ್ತೆಗೆ ಚರಂಡಿ ಮಾಡಬೇಕು ಎಂಬ ನಾಗರಿಕರ ಬೇಡಿಕೆಗೆ ಮಾಡಿ ಕೊಡುವೆ ಎಂದು ಕಳೆದ ಐದು ವರ್ಷದಿಂದ ತಲೆ ಆಡಿಸುತ್ತಲೇ ಬಂದಿರುವ ಶಾಸಕ ಅನಿಲ್ ಬೆನಕೆ ಅವರಿಗೆ ಈ ಸಲದ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲೇಬೇಕು ಎಂದು ಇದೀಗ ನಾಗರಿಕರು ಒಂದು ಸ್ಪಷ್ಟ ನಿರ್ಧಾರಕ್ಕೆ ಬಂದಾಗಿದೆ.