ಖಾನಾಪುರ: ಖಾನಾಪುರ ತಾಲೂಕಿನ ದೇವಲತ್ತಿ ಗ್ರಾಮದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆ ಮತ್ತು ಕಾಮಸಿನಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆಯನ್ನು ಶಾಸಕ ವಿಠ್ಠಲ ಹಲಗೇಕರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಲ್ಲಿ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಇಂಥ ಘಟಕಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಪ್ರತಿಯೊಬ್ಬರು ಈ ಘಟಕದ ಸದುಪಯೋಗ ಪಡೆದುಕೊಂಡು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಕಿವಿಮಾತು ಹೇಳಿದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀದೇವಿ ಚಲವಾದಿ, ಉಪಾಧ್ಯಕ್ಷೆ ಮಂಜುಳಾ ನಿಡಗಲಕರ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.