ಕಾಗವಾಡ: ಸೋಮವಾರ ಶಾಸಕ ರಾಜು ಕಾಗೆ ಅವರು ಮಾಜಿ ಸಚಿವ ಶ್ರೀಮಂತ ಪಾಟೀಲರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದು, ನನ್ನ ತಂಟೆಗೆ ಬಂದರೆ ನಿನ್ನ ಬಟ್ಟೆ ಬಿಚ್ಚಿ ಬೆತ್ತಲೆ ಮಾಡುವೆ ಎಂದು ಗುಡುಗಿದ್ದಾರೆ. ಕಾಗವಾಡದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ
ವಾಕ್ಸಮರ ಈಗ ಜನರ ರಂಜನೆಗೆ ಗ್ರಾಸವೊದಗಿಸಿದೆ.
ಭಾನುವಾರ ಶಿರಗುಪ್ಪಿಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ ಅವರು, ಕಾಗವಾಡ ಮತಕ್ಷೇತ್ರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಪೊಲೀಸ್ ಠಾಣೆ ಏಜೆಂಟರ ಅಡ್ಡೆಗಳಾಗಿ ಪರಿಣಮಿಸಿವೆ. ಕ್ಷೇತ್ರದಲ್ಲೀಗ ಭಯದ ವಾತಾವರಣ ನಿರ್ಮಾಣವಾಗಿದೆ. ಕಾಮಗಾರಿಗಳೆಲ್ಲ ಕಳಪೆಯಾಗಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದ್ದರು.
ಸೋಮವಾರ ಐನಾಪುರದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪೌರಾಡಳಿತ ನಿರ್ದೇಶನಾಲಯ ಸಂಯುಕ್ತ ಆಶ್ರಯದಲ್ಲಿ ಅಮೃತ)ಯೋಜನೆಯಡಿ ಮೊದಲ ಹಂತದಲ್ಲಿ 44ಕೋಟಿ ವೆಚ್ಚದಲ್ಲಿ ಐನಾಪುರ ಪಟ್ಟಣದಲ್ಲಿ ಪಟ್ಟಣಗಳಿಗೆ ನೀರು ಸರಬರಾಜು ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶಾಸಕ ರಾಜು ಕಾಗೆ ಮಾತನಾಡಿ, ಮಾಜಿ ಸಚಿವ ಶ್ರೀಮಂತ ಪಾಟೀಲ ಆರೋಪಕ್ಕೆ ತಿರುಗೇಟು ನೀಡಿದರು.
ನನ್ನ ಬಗ್ಗೆ ಮಾತನಾಡಲು ನಿನಗೆ ಯೋಗ್ಯತೆ ಇಲ್ಲ. ಜನರು ನಿನ್ನನ್ನು ತಿರಸ್ಕರಿಸಿದ್ದಾರೆ. ಬಸವೇಶ್ವರ ಏತ ನೀರಾವರಿಯಲ್ಲಿ ಹಲವು ಕಳಪೆ ಕಾಮಗಾರಿಗಳಿಗೆ ಹಾಗೂ ತಾಂತ್ರಿಕ ದೋಷಗಳಿಗೆ ನೀನೇ ಕಾರಣ. ರಾಜಕೀಯ ಪಾರದರ್ಶಕವಾಗಿರಲಿ, ನನಗೆ ಜನರು ಅಶೀರ್ವದಿಸಿದ್ದಾರೆ. ನೀನು ನನ್ನ ಬಗ್ಗೆ ಮಾತನಾಡಬೇಡ. ಅಪ್ಪಿತಪ್ಪಿ ಮಾತನಾಡಿದರೆ ನಾನು ನಿನ್ನ ಬಟ್ಟೆ ಬಿಚ್ಚುವೆ ಎಂದು ಏಕವಚನದಲ್ಲಿಯೇ ತಿರುಗೇಟು ನೀಡಿದರು.
ಜನಪ್ರಿಯ ಶಾಸಕ, ಬಡ ಜನರ
ಕಣ್ಮಣಿ ಎಂದು ಹೇಳಿಕೊಳ್ಳುವ ನೀವು ಪೊಲೀಸ್ ಠಾಣೆಗಳಲ್ಲಿ ಸುಳ್ಳು ದೂರು ಕೊಟ್ಟು ಬಡವರ ರಕ್ತ ಹೀರಿದ್ದೀರಿ. ಬಡವರನ್ನು ಶೋಷಣೆ ಮಾಡಿದ್ದೀರಿ. ಒಂದು ವೇಳೆ ನಾನು ಯಾರ ವಿರುದ್ಧವಾದರೂ ಒಂದು ಸುಳ್ಳು ದೂರು ಕೊಟ್ಟಿದ್ದನ್ನು ಸಾಬೀತು ಮಾಡಿದರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುವೆ. ನೀವು ಸತ್ಯ ಹರಿಶ್ಚಂದ್ರರಾಗಿದ್ದರೆ, ಅಭಿವೃದ್ಧಿ ಮಾಡಿದ್ದರೆ ಜನ ನಿಮ್ಮನ್ಯಾಕೆ ತಿರಸ್ಕರಿಸಿ ನನಗೆ ಆಶೀರ್ವದಿಸಿದರು. ನನ್ನ ಬಗ್ಗೆ ಮಾಡನಾಡುವಾಗ ಎಚ್ಚರವಿರಲಿ ಎಂದು ರಾಜು ಕಾಗೆ ವಾಗ್ದಾಳಿ ನಡೆಸಿದರು.