ಬೆಳಗಾವಿ : ಹಿಂಡಲಗಾ ಗಣಪತಿ ಮಂದಿರ ಮತ್ತು ಸುಳೇಭಾವಿಯ ಆದಿಶಕ್ತಿ ಶ್ರೀ ಮಹಾಲಕ್ಷ್ಮಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ್ ಅವರು ಯುಗಾದಿಯ ದಿನ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದರು.
ಬುಧವಾರ ಬೆಳಗ್ಗೆ ಹಿಂಡಲಗಾ ಗಣಪತಿ ಗುಡಿಗೆ ತೆರಳಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಪಕ್ಷದ ಮುಖಂಡರು, ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸಿದರು. ಪ್ರಚಾರ ಕಾರ್ಯ ಮತ್ತು ಚುನಾವಣೆಗಳು ನಿರ್ವಿಘ್ನವಾಗಿ ನಡೆಯಲಿ, ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿದರು.
ನಂತರ ಸುಳೇಭಾವಿಯ ಆದಿಶಕ್ತಿ ಶ್ರೀ ಮಹಾಲಕ್ಷ್ಮಿ ದೇವಿಯ ಸನ್ನಿಧಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ವಿಶೇಷವಾಗಿ ವಿನ್ಯಾಸಗೊಳಿಸಿದ ಪ್ರಚಾರ ವಾಹನಕ್ಕೂ ಸಹ ಪೂಜೆ ಸಲ್ಲಿಸಿ ಚುನಾವಣೆಯ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆಯನ್ನು ನೀಡಿದರು.
ಇದೇ ವೇಳೆ ಕಳೆದ 5 ವರ್ಷದ ತಮ್ಮ ಸಾಧನೆ, ಅದಕ್ಕೆ ಜನರು ನೀಡಿದ ಸಹಕಾರ, ತಾವು ಅನುಭವಿಸದ ಸಂಕಷ್ಟ, ಜನರ ಪ್ರೀತಿ ವಿಶ್ವಾಸ ಎಲ್ಲವನ್ನೂ ಸಂಕ್ಷಿಪ್ತವಾಗಿ ವಿವರಿಸುವ ಮತ್ತು ಬರಲಿರುವ ಚುನಾವಣೆಯಲ್ಲಿ ತಮ್ಮನ್ನು ಆಶಿರ್ವದಿಸುವಂತೆ ಕೋರುವ ಪ್ರಚಾರ ಕರಪತ್ರಗಳನ್ನು ಸಹ ಬಿಡುಗಡೆಗೊಳಿಸಲಾಯಿತು.
ಈ ಸಮಯದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸಿ ಸಿ ಪಾಟೀಲ, ಯುವರಾಜ ಕದಂ, ಸುರೇಶ ಇಟಗಿ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಮನೋಹರ ಬೆಳಗಾಂವ್ಕರ್, ರಮಾಕಾಂತ ಪಾವಸೆ, ರಘುನಾಥ ಖಂಡೇಕರ್, ಪ್ರವೀಣ ಪಾಟೀಲ, ಜಯವಂತ ಬಾಳೇಕುಂದ್ರಿ , ಮಹೇಶ ಸುಗ್ನೆಣ್ಣವರ, ದತ್ತಾ ಬಂಡಿಗೇಣಿ, ಶಂಕರಗೌಡ ಪಾಟೀಲ, ಬಸವರಾಜ ಮ್ಯಾಗೋಟಿ, ಬಸನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.